ಹಾಡುವಳ್ಳಿಯಲ್ಲಿ ಸಾಂಕ್ರಮಿಕ, ರೋಗ ಓರ್ವ ಮಹಿಳೆ ಸಾವು. ಜನರಲ್ಲಿ ಮನದಲ್ಲಿ ಭೂತದ ಭ್ರಮೆ


ಹಾಡುವಳ್ಳಿಯಲ್ಲಿ ಸಾಂಕ್ರಮಿಕ, ರೋಗ ಓರ್ವ ಮಹಿಳೆ ಸಾವು. ಜನರ ಮನದಲ್ಲಿ ಭೂತದ ಭ್ರಮೆ
ಮುಹಮ್ಮದ್ ರಝಾ ಮಾನ್ವಿ.

ಭಟ್ಕಳ:೨೬, ಭಟ್ಕಳ ನಗರದಿಂದ ೨೦ಕಿ.ಮಿ ದೂರದಲ್ಲಿರುವ ಹಿಂದುಳಿದ ಪ್ರದೇಶವೆಂದೇ ಗುರುತಿಸಲ್ಪಡುವ ಹಾಡುವಳ್ಳಿಯ ಕೆಲವು ಪ್ರದೇಶಗಳಲ್ಲಿ ಯಾವುದೋ ಸಾಂಕ್ರಾಮಿಕ ರೋಗವು ಮನೆಮಾಡಿಕೊಂಡಿದ್ದು ಅದೀಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಅಲ್ಲಿನ ಜನತೆಯಲ್ಲಿ ದಿಗ್ಭ್ರಮೆಯನ್ನು ಮೂಡಿಸಿದೆ. ಆತಂಕಿತ ಗ್ರಾಮೀಣ ಜನತೆ ಇದೊಂದು ಭೂತ (ಗಾಳಿ) ಎಂದು ಭಾವಿಸಿ ಮಾಟ ಮಂತ್ರ ಅಥವ ಮತ್ಯಾವುದೋ ಬಾಬಗಳಿಗೆ ಮೊರೆಹೋಗಿರುವ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ಎರಡು ತಿಂಗಳ ಹಿಂದೆ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಯಾಣಿ, ಮೂರ‍್ಕೋಡಿ,ತೋಟದಮಕ್ಕಿ ಮುಂತಾದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು ಅದೀಗ ಬಹಿರಂಗಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದಲೋ ಅಥವಾ ಇನ್ನಿತರ ಯಾವುದೋ ಕಾರಣದಿಂದಲೋ ಓರ್ವ ಮಹಿಳೆ ಇಲ್ಲಿ ಸಾವನ್ನಪ್ಪಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮೃತ ಮಹಿಳೆ ಮಾಸ್ತಮ್ಮ ನಾರಾಯಣ ನಾಯ್ಕ (೩೫) ಕಳೆದ ಕೆಲವು ದಿನಗಳಿಂದ ತೀವ್ರತರವಾದ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ಕೂಡ ನೀಡಲಾಗಿತ್ತು. ಆಕೆಯನ್ನು ಬದುಕಿಸಲು ಕುಟುಂಬದವರು ಹಳ್ಳಿವೈದ್ಯರ ಮೊರೆ ಹೋಗಿದ್ದು ಅವರು ಆಕೆಗೆ ಮುರ್ತಿ(ದೆವ್ವ) ಹೊಡೆದಿದೆ ಎಂದು ನಂಬಿಸಿ ಕಡಲತೀರದ ಗ್ರಾಮವೊಂದರಲ್ಲಿ ಶ್ವಾನ ಚಿಕಿತ್ಸೆಯನ್ನೂ ಸಹ ಕೈಗೊಳ್ಳಲಾಗಿತ್ತು. ಇದು ಯಾವುದು ಸಹ ಆಕೆಗೆ ಬದುಕನ್ನು ನೀಡಲಿಲ್ಲ. ಏನು ಮಾಡಿದರೂ ಸಹ ಮಾಸ್ತಮ್ಮಳ ಜೀವ ಉಳಿಯಲಿಲ್ಲ. ಆದರೆ ತಾಲೂಕಾ ವೈದ್ಯರು ಮೃತಪಟ್ಟಿದ್ದು ಸಾಂಕ್ರಾಮಿಕ ರೋಗದಿಂದ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗದರೆ ಮೂಢನಂಬಿಕಯು ಆಕೆಯ ಜೀವಕ್ಕೆ ಮುಳುವಾಯಿತೆ? ಇಂದಿನ ಆಧುನಿಕ ಜಗತ್ತಿನಲ್ಲಿಯು ಸಹ ಮೂಢನಂಬಿಕೆ ಬಲಿಯಾಗುವವರು ಇದ್ದಾರೆಯೆ? ಎಂದು ಜನ ಆಡಿಕೊಳ್ಳುವಂತಾಗಿದೆ.
ಹಾಡುವಳ್ಳಿ ಪ್ರದೇಶದಲ್ಲಿ ಇಲ್ಲಿಯ ವರೆಗೆ ಸುಮಾರು ಹದಿನೈದು ಮಂದಿ ವಿವಿಧ ಕಾಯಿಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಗುಣಮುಖವಾದರೆ, ಇನ್ನೂ ಕೆಲವರು ಕುಂದಾಪುರ, ಮಣಿಪಾಲ ಹಾಗೂ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹಾಡುವಳ್ಳಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ತೇಜಸ್ವಿನಿ ಪದ್ಮಯ್ಯ ನಾಯ್ಕ ತೀವ್ರತರವಾದ ಕಿವಿ ಸೋರುವಿಕೆಯಿಂದ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅದರಂತೆ ಶಾರದಾ ನಾಯ್ಕಳು ವಾಂತಿ, ಜ್ವರದಿಂದ ಬಳಲುತ್ತಿದ್ದು, ನಿಧಾನವಾಗಿ ಗುಣಮುಖವಾಗುತ್ತಿದ್ದಾಳೆ. ಪಾರ್ವತಿ ಹಾಗೂ ರಮೇಶ ಪೂಜಾರಿ ಜ್ವರದಿಂದ ಬಳಲಿ ಗುಣಮುಖರಾಗುತ್ತಿದ್ದಾರೆ. ಅದರಂತೆ ರಾಧಾ ನಾಯ್ಕ ಸಣ್ಣ ಕರುಳು ಸೋಂಕಿನಿಂದ ಬಳಲುತ್ತಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಾದೇವಿ ಜೈರಾಮ ನಾಯ್ಕ ಜ್ವರ ವಾಂತಿಯಿಂದ, ಗಣೇಶ ದಯಾನಂದ ಬಂಡಾರಿ ತಲೆ ನೋವು, ಜ್ವರ, ವಾಂತಿಯಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಂತೆ ಕೃಷ್ಣ ತಿಮ್ಮಪ್ಪ ಜಂಬೂರಮಠ, ಶ್ರೀಧರ ನಾಯ್ಕರೂ ಸಹ ಜ್ವರ, ನೆಗಡಿಯಿಂದ ಬಳಲುತ್ತಿದ್ದಾರೆ. ವೃದ್ದ ಶನಿಯಾರ ನಾಯ್ಕ ಮೂತ್ರ ಸೋಂಕಿನಿಂದ ಕಂಗಾಲಾಗಿದ್ದಾರೆ, ಸಣ್ಣಿ ಗೊಂಡ ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಿನ್ನೆ ಬೆಳಿಗ್ಗೆಯಿಂದ ವಿದ್ಯಾರ್ಥಿನಿ ಮುಕ್ತಾ ಶೆಟ್ಟಿ ಸಹ ಜ್ವರ, ವಾಂತಿ, ತಲೆ ನೋವಿನಿಂದ ಕಂಗಾಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ವಿಚಿತ್ರವೆಂದರೆ ಕಳೆದ ಎರಡು ತಿಂಗಳಿನಿಂದ ಇಲ್ಲಿನ ಜನರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದರೂ ಮನೆ ಮನೆಗೆ ತಿರುಗಾಡುವ ಆರೋಗ್ಯ ಸಹಾಯಕಿಯ ಗಮನಕ್ಕೆ ಬಂದಿಲ್ಲವೇ ಎಂಬುದು ಪ್ರಶ್ನೆಯಾಗಿದೆ. ಕಾಯಿಲೆಯ ಕುರಿತು ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಜನರು ಚಿಕಿತ್ಸೆಗಾಗಿ ದೂರದ ಮಂಗಳೂರು, ಮಣಿಪಾಲ, ಕುಂದಾಪುರಕ್ಕೋ ಹೋಗುವುದನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನಿದ್ದರೂ ಅತಂಕಕ್ಕೊಳಗಾದ ಗ್ರಾಮೀಣ ಪ್ರದೇಶದ ಜನರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಪಂ ಆಡಳಿತ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಬೇಕಿದೆ.
ದೆವ್ವ ಭೂತದ ಭ್ರಮೆ ರೋಗಪೀಡಿತರಿಗೆ ಶ್ವಾನ ನೆಕ್ಕಿಸುವುದು:
ಹಳ್ಳಿಯ ಜನ ಇನ್ನು ತಮ್ಮ ಹಳ್ಳಿಯ ಗುಂಗಿನಲ್ಲೆ ಇದ್ದಾರೆ ಅವರು ಅದರಿಂದ ಹೊರಬರಲು ಈಗಲೂ ಸಿದ್ದರಿಲ್ಲ, ಇತ್ತಿಚೆಗೆ ಜರುಗಿದ ಒಂದು ಪ್ರೌಢಶಾಲಾ ಶಿಕ್ಷಕರ ಆರೋಗ್ಯ ಕಾರ್ಯಗಾರದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ಮಂಜುನಾಥ್ ಶೆಟ್ಟಿ ಹೇಳಿದ್ದು ಜನರು ಹಾವು ಕಚ್ಚಿದರು ಕೂಡ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವುದನ್ನು ಬಿಟ್ಟು ಕಚ್ಚಿದ ಹಾವು ಹುಡಕಾಟದಲ್ಲಿ ಸಮಯ ಹಾಳು ಮಾಡುತ್ತಾರೆ. ಹಾವು ಸಿಗುವ ವೇಳೆಗೆ ಹಾವು ಕಚ್ಚಿಸಿಕೊಂಡಾತನ ಪ್ರಾಣ ಪಕ್ಷಿ ಹಾರಿಹೋಗಿರುತ್ತದೆ ಇಲ್ಲವೆ ಅದರ ಚಿಕಿತ್ಸೆಯ ಸಮುಯ ಮುಗಿದಿರುತ್ತದೆ ಆಗ ವೈದ್ಯರ ಕೆಲಸ ಏನು ಇರುವುದಿಲ್ಲ. ಭಟ್ಕಳ ತಾಲೂಕಿನಾದ್ಯಂತ ಮೂಢನಂಬಿಗೆ ಬಹುವಾಗಿ ಹರಡಿಕೊಂಡಿದ್ದು ಇದಕ್ಕೆ ಉತ್ತಮ ಉದಾಹರಣೆ ಹೆಬಳೆ, ತೆಂಗಿನಗುಂಡಿ ಭಾಗದಲ್ಲಿ ಕೆಲವು ವಿಚಿತ್ರ ಸಾಂಕ್ರಾಮಿಕ ರೋಗ ಗಳಿಗೆ ನಾಯಿಯನ್ನು ನೆಕ್ಕಿಸಿ ಚಿಕಿತ್ಸೆಯನ್ನು ನಿಡುತ್ತಿದ್ದಾರೆ. ರೋಗಿಯ ಬೆನ್ನೆಗೆ ನಾಯಿಯನ್ನು ನೆಕ್ಕಿಸುವ ಮೂಲಕ ಈ ರೋಗ ಗುಣಪಡಿಸಬಹುದೆಂಬ ಹುಚ್ಚು ಈಗಲೂ ಜನರಲ್ಲಿ ಮನೆ ಮಾಡಿಕೊಂಡಿದ್ದು ನಾಯಿ ಜೊಲ್ಲಿನಿಂದ ಮಹಾ ಮಾರಕ ಕಾಯಿಲೆ ರ‍್ಯಾಬಿಸ್ ಉಂಟಾಗುವ ಸಾಧ್ಯತೆ ಇರುವುದರಿಂದ ಈ ನಾಯಿ ನೆಕ್ಕಿಸುವುದು ಅತ್ಯಂತ ತೊಂದರೆದಾಯಕವಾಗಿದ್ದು ಇದರಿಂದ ಜನರನ್ನು ತೆಡೆಯಬೇಕು ಎಂದು ಹೇಳಿದ್ದು ಜನರು ತಮ್ಮ ಹಳ್ಳಿಯ ಗುಂಗಿನಿಂದ ಹೊರಬರಬೇಕಾಗಿದೆ.
ಹಾಡುವಳ್ಳಿಯ ವಿವಿಧ ಪ್ರದೇಶಗಳಲ್ಲಿ ಕಲುಷಿತವಾದ ನೀರು ಕುಡಿದಿದ್ದರಿಂದಲೋ ಅಥವಾ ಆಹಾರ ಪದ್ದತಿಯಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದಲೋ ತೀವ್ರತರವಾದ ಜ್ವರ, ವಾಂತಿ ನೆಗಡಿ,ಕೈಕಾಲು ನೋವಿನಿಂದ ಕಂಗಾಲಾದ ಜನರಿಗೆ ಮುರ್ತಿ ಹೊಡೆದಿದೆ ಎಂದು ಕೆಲವರು ಹೇಳಿದ್ದರಿಂದ ಇದನ್ನೇ ನಂಬಿದ ಕುಟುಂಬಸ್ಥರು ಭಟ್ಕಳದ ಕಡಲತೀರ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಶ್ವಾನ ಚಿಕಿತ್ಸೆಯನ್ನೂ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಜನತೆ ಇಂದಿನ ವಿಜ್ಞಾನ ತಂತ್ರಜ್ಞಾನದ ಯುಗದಲ್ಲೂ ಮುರ್ತಿ,ಗಾಳಿ,. ದೆವ್ವ ಹೊಡೆಯುತ್ತದೆ ನಂಬಿಕೆಯಿಂದ ಜೀವಿಸುತ್ತಿರುವುದು ಕಂಡರೆ ನಿಜಕ್ಕೂ ನಮ್ಮ ದೇಶ ಹೊಳೆಯುತ್ತಿದೆಯೆ? ಎಂಬ ಸಂಶಯ ಮೂಡುತ್ತದೆ. ಮುರ್ತಿ ಹೊಡೆದ ವ್ಯಕ್ತಿಗಳ ಬೆನ್ನಿಗೆ ಶ್ವಾನದಿಂದ ನೆಕ್ಕಿಸುವುದು, ಮಂತ್ರ, ತಾಯಿತಗಳನ್ನು ಕಟ್ಟಿಸುವುದರಿಂದ ರೋಗ ಪರಿಹಾರವಾಗುತ್ತಿದ್ದರೆ ನಮ್ಮ ದೇಶಕ್ಕೆ ವೈದ್ಯರ ಅವಶ್ಯಕತೆ ಇರುತ್ತಿರಲ್ಲ ಮತ್ತು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿಯೂ ಮೆಡಿಕಲ್ ಸೀಟು ಸಿಗಲಿಲ್ಲ ಎಂದು ಆತ್ಮ ಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯು ಉದ್ಭವಿಸುತ್ತಿರಲ್ಲ. ಸಾಂಕ್ರಾಮಿಕ ರೋಗ ಹರಡಿದ ಹಾಡುವಳ್ಳಿಯಲ್ಲೂ ಇಂತಹದ್ದೊಂದು ಪ್ರಯೋಗ ನಡೆದಿರಲೂಬಹುದು.
ಹಾಡುವಳ್ಳಿಯಲ್ಲಿ ಯಾವೂದೋ ಅಮ್ಮನ ಮೂರ್ತಿಯೊಂದು ಭಗ್ನವಾಗಿದ್ದು ಆ ಭಗ್ನಗೊಂಡ ಮೂರ್ತಿಯನ್ನು ಪೂಜಿಸುತ್ತಿರುವುದರಿಂದಲೆ ಜನರು ಇಂತಹ ಸಮಸ್ಯೆಯಲ್ಲಿ ಸಿಲುಕಲು ಕಾರಣ ಎಂಬ ಕಥೆಯೊಂದು ಈ ಭಾಗದಲ್ಲಿ ಹುಟ್ಟಿಕೊಂಡಿದೆ. ಏನೆ ಇರಲಿ ಇಂದಿಗೂ ಹಳ್ಳಿಗಳು ಸುಧಾರಣೆಯಾಗಿಲ್ಲ ಎನ್ನುವ ವಿಚಾರಗಳು ಇಂತಹ ಘಟನೆಗಳಿಂದ ಸಾಬೀತಾಗುತ್ತದೆ. ನಮ್ಮ ದೇಶ ಹಳ್ಳಿಗಳ ದೇಶವಾಗಿದ್ದು ಗ್ರಾಮಗಳ ಸುಧಾರಣೆಯಿಂದಲೆ ದೇಶದ ಸುಧಾರಣೆ ಸಾಧ್ಯ ಎನ್ನವ ಮಾತನ್ನು ನಾವಿಂದು ಒಪ್ಪಲೆಬೇಕಾಗಿದ್ದು ಸರಕಾರವು ಗ್ರಾಮಗಳ ಸುಧಾರಣೆಗಳಿಗೆ ಸಾಕಷ್ಟು ಒತ್ತು ನೀಡಬೇಕು ಅಲ್ಲಿ ಸ್ವಚ್ಚವಾದ ಕುಡಿಯುವ ನೀರು ಶಿಕ್ಷಣ ಮಹಿಳೆಯರ ಸಾಕ್ಷರತೆ, ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಜನರನ್ನು ಹೆಚ್ಚು ಹೆಚ್ಚು ಶಿಕ್ಷಿತರನ್ನಾಗಿ ಕಾರ್ಯವಾಗಬೇಕಿದೆ.
ತಾಲೂಕಾ ವೈದ್ಯರ ತಂಡ ಹಾಡುವಳ್ಳಿಗೆ ಭೇಟಿ:
ಹಾಡುವಳ್ಳಿಯಲ್ಲಿ ಸಾಂಕ್ರಾಮಿಕ ರೋಗ ಉಲ್ಭಣಿಸಿದ ಸುದ್ದಿ ತಿಳಿದ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮೂರು ದಿನಗಳಿಂದ ಅಲ್ಲಿಯೇ ಇದ್ದು, ರೋಗಿಗಳ ಹಾಗೂ ಸಾರ್ವಜನಿಕರ ರಕ್ತ ಪರೀಕ್ಷೆ ಮಾಡಿ ಸ್ವಚ್ಛತೆಯ ಕುರಿತು ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಇನ್ನಿತರ ಮಾಹಿತಿಯನ್ನು ನೀಡುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ಏನೇ ಆದರೂ ಸಹ ತಕ್ಷಣ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯವಂತೆ ವಿನಂತಿಸುತ್ತಿರುವುದು ಕಂಡು ಬಂದಿದೆ. ಕಲುಷಿತ ನೀರು ಕುಡಿಯುವುದು, ಉಪಯೋಗಿಸುವುದರಿಂದ ಕೆಲವೊಮ್ಮೆ ಇಂತಹ ರೋಗ ಉಲ್ಬಣಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಮೇಲೆ ಜನಪ್ರತಿನಿಧಿಗಳ ಒತ್ತಡ ಹೆಚ್ಚಾಗಿದ್ದು, ಎಲ್ಲೆಡೆಯಿಂದ ಸೂಕ್ತ ಚಿಕಿತ್ಸೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ:
ಹಾಡುವಳ್ಳಿಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಔರಧ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ ನಿನ್ನೆ ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಕಾಶ ಕಾಮತ್, ಆರೋಗ್ಯ ಶಿಕ್ಷಣಾಧಿಕಾರಿ ಎಂ ಡಿ ನಾಯ್ಕ, ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ ಹಾಗೂ ಮತ್ತಿತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರೋಗಿಗಳಿಗೆ ಧೈರ್ಯ ತುಂಬಿದರು. ಈ ಪ್ರದೇಶದ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಸ್ಥಳಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಸಿಡಿಪಿ‌ಓ ನಾಗೇಶ ಶೆಟ್ಟಿ, ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಭೇಟಿ ನೀಡಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ