ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ
*ಎಂ.ಆರ್.ಮಾನ್ವಿ ಭಟ್ಕಳ
ಹೈದರಾಬಾದ್ ಕರ್ನಾಟಕದಲ್ಲಿ ಹುಟ್ಟಿಬೆಳದ ನನಗೆ ‘ಆಲೆಮನೆ’ ಅನುಭವ ತೀರ ಹೊಸದು. ಭಟ್ಕಳಕ್ಕೆ ಬಂದ ನಂತರ ಆಲೆಮನೆ ಕಾಣಲು ೧೭ವರ್ಷಗಳೇ ಬೇಕಾಯಿತು. ಇತ್ತಿಚಿಗೆ ನನ್ನ ಸಹೋದ್ಯೋಗಿ ಮಿತ್ರ ವಿನಾಯಕ ಭಟ್ ತಮ್ಮ ಹಳ್ಳಿಯಲ್ಲಿ ‘ಆಲೆಮನೆ’ ಶುರುವಾಗಿದೆ ಎಂದು ಅದರ ಸೊಗಸನ್ನು ವರ್ಣಿಸುತ್ತಿದ್ದರು. ನನಗೆ ಆಲೆಮನೆ ಕಾಣಬೇಕೆಂಬ ಬಹುದಿನಗಳ ಹಂಬಲದಿಂದ ನಾನೂ ಆಲೆಮನಗೆ ಬರುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ಬಹಳ ಸಂತೋಷದಿಂದ ಒಪ್ಪಿ ನನ್ನನ್ನು ಆಲೆಮನೆ ದರುಶನ ಮಾಡಿಸಿದರು.
ಆಲೆಮನೆಯಂದರೆ ಅದೆಂತದೋ ದೊಡ್ಡಮನೆಯಲ್ಲಿ ಬೆಲ್ಲ ತಯಾರಿಸುವ ಫ್ಯಾಕ್ಟರಿ ಇರುತ್ತದೆ ಎಂದುಕೊಂಡಿದ್ದ ನನಗೆ ಅಲ್ಲಿ ಹೋದಾಗ ಕಂಡಿದ್ದೆ ಬೇರೆ.
ಸುಮಾರು ೮೫-೯೦ ವರ್ಷದ ಹಿರಿಯರೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಕೋಣಗಳ ಹಿಂದೆ ತಿರುಗುತ್ತ ಗಾಣದಲ್ಲಿ ಎಣ್ಣೆ ತೆಗೆಯುವ ಹಾಗೆ ಕಬ್ಬಿನ ರಸವನ್ನು ತೆಗೆಯುತ್ತಿದ್ದರು. ಒಂದೆಡೆ ಕೊಪ್ಪರಿಗೆಯೊಂದರಲ್ಲಿ ಕೊತಕೊತನೆ ಕುದಿಯುತ್ತ ತನ್ನ ಸುತ್ತಲೆಲ್ಲ ಸುವಾಸನೆ ಬೀರುತ್ತ ಕಬ್ಬಿನ ಹಾಲಿನ ರಸ ಪಾಕವಾಗಲು ಸಿದ್ದವಾಗತೊಡಗಿತ್ತು. ನಮ್ಮನ್ನು ಕಂಡವರೆ ಆ ೯೦ವರ್ಷದ ಅಜ್ಜ ಎದ್ದು ನಿಂತು ಸಾಹೇಬರನ್ನು ಬರಮಾಡಿಕೊಂಡಂತೆ ನಮ್ಮನ್ನು ಬರಮಾಡಿಕೊಂಡು ಅಲ್ಲಿಯೆ ಕುಳಿತುಕೊಳ್ಳಲು ಹಾಕಿದ್ದ ಬೆತ್ತಲು ಪಲ್ಲಂಗದ ಮೇಲೆ ಕುಳಿತುಕೊಳ್ಳುವಂತೆ ತಮ್ಮ ಬಡಕಲು ಕೈಯಿಂದ ಸನ್ನೆ ಮಾಡಿದರು. ಅಷ್ಟರಲ್ಲೆ ಅವರ ಮಗ ದೊಡ್ಡ ಲೋಟವೊಂದರಲ್ಲಿ ಆಗತಾನೆ ಗಾಣದಿಂದ ತೆಗೆಯುತ್ತಿದ್ದ ಕಬ್ಬಿನ ರಸ ತಂದು ಮುಂದಿಟ್ಟು ಕುಡಿಯುವಂತೆ ತಿಳಿಸಿದರು. ಮುಜುಗರಗೊಂಡ ನಾನು ಸ್ವಲ್ಪ ಕೊಡಿ ಇಷ್ಟೊಂದು ಆಗುವುದಿಲ್ಲ ಎಂದೆ. ಅದಕ್ಕೆ ಅವರು ಇಲ್ಲಿ ಬಂದವರು ಕಬ್ಬಿನ ಹಾಲು ಕುಡಿಯಲಿಲ್ಲವೆಂದರೆ ಹೇಗೆ ನೀವು ಎಷ್ಟು ಕುಡಿತಿರೋ ಅಷ್ಟು ಕುಡಿಯಿರಿ ಎಂದು ಹಟ ಮಾಡಿ ಬಿಡದೆ ನನಗೆ ಕುಡಿಯಲು ಹಾಲು ಕೊಟ್ಟರು. ಪೇಟೆಯಲ್ಲಿ ಇದೇ ಹಾಲು ಏನಿಲ್ಲವೆಂದರೆ ೫೦-೭೦ ರೂ ಆಗಬಹುದು.
ಭಟ್ಕಳದಿಂದ ಸುಮಾರು ೧೫ಕಿ.ಮೀ ದೂರದ ಅಂತರದಲ್ಲಿರುವ ಕಟಗಾರಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿನ ಮರ,ಗುಡ್ಡಗಳಿಂದ ಕೂಡಿದ ಪ್ರದೇಶವೊಂದರಲ್ಲಿ ಸುಮಾರು ೨ಎಕರೆ ಹೊಲಗದ್ದೆಗಳಲ್ಲಿ ೫ಗುಂಟೆ ಜಾಗದಲ್ಲಿ ಕಬ್ಬು ಕೃಷಿ ಮಾಡಿಕೊಂಡು ಪ್ರತಿವರ್ಷವೂ ತಪ್ಪದೆ ಕಳೆದ ೬೦ವರ್ಷಗಳಿಂದ ಆಲೆಮನೆಯ ನಡೆಸುತ್ತ ಬಂದಿರುವ ೯೦ ವಯಸ್ಸಾದರೂ ದೇಹ ಬಡಕಲಾದರೂ ಇನ್ನು ದೃಷ್ಟಿ ಹಾಗೂ ಶ್ರವಣಗಳು ಯಾವುದೇ ರೀತಿಯ ಹಾನಿಗೊಳಗಾಗದೆ ಲವಲವಿಕೆಯಿಂದ ತಮ್ಮ ಮೂವರು ಮಕ್ಕಳೊಂದಿಗೆ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸೋಮಯ್ಯ ಮಾಸ್ತಿಗೊಂಡ ತಮ್ಮ ಅರವತ್ತು ವರ್ಷಗಳ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡರು.
ತಮ್ಮ ಮದುವೆಗೂ ಮುಂಚೆ ೨೦ವರ್ಷಗಳ ಯುವಕರಾಗಿದ್ದಾಗ ಆರಂಭಿಸಿದ ಈ ‘ಆಲೆಮನೆ’ ವ್ಯವಹಾರ ಈಗಲೂ ತಮ್ಮ ಆತ್ಮ ಸಂತೋಷಕ್ಕಾಗಿ ಪ್ರತಿವರ್ಷ ತಪ್ಪದೆ ನೆರವೇರಿಸುತ್ತಿದ್ದಾರೆ. ಮಕ್ಕಳಾದ ಮಂಜು ಸೋಮಯ್ಯಗೊಂಡ, ನಾಗಪ್ಪ ಸೋಮಯ್ಯಗೊಂಡ ತಮ್ಮ ಅಪ್ಪನ ಸಂತೋಷಕ್ಕಾಗಿ ಸಾತ್ ನೀಡುತ್ತಿದ್ದಾರೆ.
ಆಲೆಮನೆ ಎಂಬುದು ವ್ಯವಹಾರಿಕೆ ಉದ್ಯೋಗವಾಗಿದ್ದರೂ ಅದರಿಂದ ಬರುವ ಪ್ರಯೋಜನವೇನು ಇಲ್ಲ ಎನ್ನುವ ಸೋಮಯ್ಯ ಬಂದಷ್ಟು ಮನೆಗೆ ಮತ್ತು ಅಲ್ಪಸ್ವಲ್ಪ ಮಾರಾಟಕ್ಕೆ ಉಳಿದಿದ್ದು ಸಂತೋಷ ಮಾತ್ರ ಎನ್ನುತ್ತಾರೆ.
ಆಧುನಿಕ ವಿಜ್ಞಾನ ತಂತ್ರಜ್ಞಾನದ ಈ ಯುಗದಲ್ಲೂ ಕೋಣವನ್ನು ಗಾಣಕ್ಕೆ ಕಟ್ಟಿ ತಿರುಗಿಸುವ ಪದ್ದತಿ ಮಾತ್ರ ನಿಜಕ್ಕೂ ಆಶ್ಚರ್ಯಕರ. ಒಂದು ದಿನಕ್ಕೆ ೨೦೦ರಿಂದ ೪೦೦ ರೂ ಗಳ ವರೆಗೆ ದುಡಿಯುವ ಕೋಣ ತಿರುಗಿಸುವ ವ್ಯಕ್ತಿ ಜೋಡು ಕೋಣಗಳ ಮೇವು ಮತ್ತು ಅದರ ಆಹಾರಕ್ಕಾಗಿ ಇದೆಲ್ಲ ಮಾಡಬೇಕಾಗುತ್ತಿದೆ. ಮತ್ತು ಹಿಂದಿನಿಂದಲೂ ಬಂದ ಪದ್ದತಿಯನ್ನು ಹೇಗೆ ಬಿಡುವುದು ಎಂದೂ ಇದನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವಾಗಿ ವೆಂಕಟ್ರಮಣ ನಾರಾಯಣ ನಾಯ್ಕ ಹೇಳುತ್ತಾರೆ.
ಉತ್ತರಕನ್ನಡ ಜಿಲ್ಲೆ ಆಲೆಮನೆಗೆ ಹೆಸರುವಾಸಿಯಾದ ಜಿಲ್ಲೆ. ಜನವರಿ, ಫೆಬ್ರುವರಿ ತಿಂಗಳಿನಲ್ಲಿ ಜಿಲ್ಲೆಯ ಅಲ್ಲಲ್ಲಿ ಆಲೆಮನೆ ಸಂಭ್ರಮ ಇಲ್ಲಿ ಮಕ್ಕಳು ಮುದುಕರು, ನೆಂಟರೂ ಎಲ್ಲರೂ ಆಲೆಮನೆಗೆ ಹೋಗಿಬಂದು ಅಲ್ಲಿ ಸಿಗುವ ತಾಜಾ ಕಬ್ಬಿನ ಹಾಲು ಕುಡಿದು ಘಮಘಮಿಸುವ ಕೊಪ್ಪರಿಗೆ ಬೆಲ್ಲ ಸವಿದು ಬರುತ್ತಾರೆ. ಬಂದು ಹೋಗುವವರು ಬೆಲ್ಲವನ್ನು ಕಟ್ಟುತ್ತಾರೆ. ಅವರಿಗೆ ಒಂದು ಉಂಡೆ ಬೆಲ್ಲ ಕೊಟ್ಟು ಕಳುಹಿಸುವ ವಾಡಿಕೆಯಿದೆ ಎನ್ನುತ್ತಾರೆ ಸೋಮಯ್ಯ.
ಪ್ರತಿಯೊಂದನ್ನು ವ್ಯಾಪಾರಿ ಮನೋಭಾವದಿಂದ ಕಾಣುವ ಇಂದಿನ ಭೌತಿಕ ಜಗತ್ತಿನಲ್ಲೂ ಕೇವಲ ಆತ್ಮ ಸಂತೋಷಕ್ಕಾಗಿ ತಮ್ಮ ಹಿಂದಿನ ಪರಂಪರೆಯನ್ನು ಈಗಲೂ ಉಳಿಸಿಕೊಂಡು ಬಂದ ಕೆಲ ಬೆರಳೆಣಿಕೆಯ ಜನಗಳಲ್ಲಿ ಸೋಮಯ್ಯಗೊಂಡರು ಒಬ್ಬರೂ. ‘ಆಲೆಮನೆ’ ಯಲ್ಲಿ ಸಿಕ್ಕಷ್ಟನ್ನೆ ತೃಪ್ತಿಪಟ್ಟುಕೊಳ್ಳುವ ಅವರು ಇದಕ್ಕಾಗಿ ತಗಲುವ ಕಚ್ಚುವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ‘ಆಲೆಮನೆಯೆಂದರೆ ಉಳಿದಿದ್ದು ಒಂದು ಸೇರು ಬೆಲ್ಲ ಮಾತ್ರ’ ಎನ್ನುವ ಗಾದೆಯನ್ನು ಹೇಳುತ್ತಾರೆ. ಕೆಲವರು ಧಾರ್ಮಿಕ ಕಾರ್ಯಗಳಿಗೆ ಈ ಆಲೆಮನೆ ಬೆಲ್ಲವನ್ನು ಉಪಯೋಗಿಸುತ್ತಿದ್ದು ತಮಗೆ ಇಂತಿಷ್ಟು ಬೆಲ್ಲ ಬೇಕು ಎಂದು ಹೇಳಿ ಮೊದಲೆ ಕಾಯ್ದಿರಿಸುತ್ತಾರೆ.
ಒಮ್ಮೆ ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಹಾಕುವ ಕ್ರಿಯೆಗೆ ‘ಅಡುಗೆ’ ಎಂದು ಕರೆಯುತ್ತಾರೆ. ಒಂದು ಅಡುಗೆಯಲ್ಲಿ ಸುಮಾರು ೨೦೦ಉಂಡೆ ಬೆಲ್ಲ ಸಿದ್ದವಾಗುತ್ತದೆ. ಒಂದು ಉಂಡೆ ಸಾಮಾನ್ಯವಾಗಿ ೩೫೦ಗ್ರಾಮ ತೂಗುತ್ತದೆ. ಅತ್ಯಂತ ಹೆಚ್ಚು ಶ್ರಮ ಬೇಡುವ ಈ ಕಾಯಕ ಒಂದಿಬ್ಬರಿಂದ ಆಗುವುದಲ್ಲ. ಇದಕ್ಕೆ ಸುಮಾರು ಏನಿಲ್ಲವೆಂದರೂ ೫-೬ಜನರು ಶ್ರಮ ಪಡಬೇಕು. ಕೋಣಗಳ ಹಿಂದೆ ತಿರುಗುವವರು, ಹಾಲನ್ನು ಸಂಗ್ರಹಿಸುವವರು, ಪಾಕವನ್ನು ಸಿದ್ದಗೊಳಿಸುವವರು, ಕೊಪ್ಪರಿಗೆ ಒಲೆಗೆ ಕಟ್ಟಿಗೆ ಹಾಕುವವರು ಹೀಗೆ ಮನೆಯ ಎಲ್ಲ ಸದಸ್ಯರ ಶ್ರಮವು ಇದು ಬೇಡುತ್ತದೆ. ‘ಒಂದು ಬೇಕು ಎರಡು ಸಾಕು’ ಎನ್ನುವ ಈ ಕಾಲದಲ್ಲಿ ಅಷ್ಟೊಂದು ಜನ ಎಲ್ಲಿಂದ ತರಬೇಕು. ಕೂಲಿಯವರಾದರೆ ಅವರಿಗೆ ಕೂಲಿ ನೀಡಲು ಸಾಕಾಗುವುದಿಲ್ಲ. ಆದ್ದರಿಂದ ಇತ್ತಿಚಿನ ದಿನಗಳಲ್ಲಿ ಈ ಆಲೆಮನೆ ಉಸಬಾರಿಕೆ ನಮಗೇಕೆ ಬೇಕು ಎನ್ನುವವರಿಗೇನು ಕಡಿಮೆಯಿಲ್ಲ. ಅದೂ ಅಲ್ಲದೆ ಯಾವುದೇ ಯಂತ್ರಗಳ ಸಹಾಯವಿಲ್ಲದೆ ಮಾಡುವ ಬೆಲ್ಲ ಮಾತ್ರ ಅತ್ಯಂತ ಶುದ್ದ ಹಾಗೂ ರುಚಿಕರವಾಗಿರುತ್ತದೆ ಎನ್ನುವ ಮನೋಭಾವವೂ ಇರುವುದರಿಂದ ಆಲೆಮನೆಗೆ ಯಂತ್ರಗಳನ್ನು ಅಳವಡಿಸುವುದನ್ನು ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವ ಆಲೆಮನೆಗರು ಇಷ್ಟ ಪಡುವುದಿಲ್ಲ.
ಒಂದು ಕೊಪ್ಪರಿಗೆ ಬೆಲ್ಲ ಸಿದ್ದಗೊಳ್ಳಬೇಕಾದರೆ ಸುಮಾರು ೫ಗಂಟೆಯಾದರೂ ಸಮಯಬೇಕು. ದಿನಕ್ಕೆ ಎರಡು ಬಾರಿ ಅಡುಗೆ ಏರುತ್ತದೆ. ಅಂದರೆ ೧೦ಗಂಟೆಗಳ ನಿರಂತರ ಶ್ರಮದ ಫಲವೇ ನಮಗೆ ಸಿಹಿಸಿಹಿಯಾದ ಬೆಲ್ಲದ ರೂಪದಲ್ಲಿ ಸಿಗುತ್ತದೆ.
ಶ್ರಮರಹಿತ ಐಶಾರಾಮದ ಜೀವನ ನಡೆಸುವ ಇಂದಿನ ಆಧುನಿಕ ಪೀಳಿಗೆ ಸೋಮಯ್ಯಗೊಂಡರಂತಹ ಶ್ರಮಜೀವಿಗಳು ಮಾದರಿಯೋಗ್ಯರಾಗಿದ್ದಾರೆ. ಯಂತ್ರಯುಗದ ಭರಾಟೆಯಲ್ಲಿ ನಶಿಸಿಹೋಗುತ್ತಿರುವ ಪಾರಂಪರಿಕ ಆಲೆಮನೆಗಳಲ್ಲಿ ಸೋಮಯ್ಯಗೊಂಡರಂತಹವರು ಇನ್ನೂ ಬದುಕಿದ್ದಾರೆ ಅನ್ನುವುದೇ ಸಂತೋಷದ ಸಂಗತಿ.
ಆಲೆಮನೆಯ ಘಮಘಮ ಸುವಾಸನೆಯನ್ನು ಆಘ್ರಾಣಿಸುತ್ತ ತಾಜಾಕಬ್ಬಿನ ಹಾಲೂ ಹಾಗೂ ಒಂದು ಉಂಡೆಬೆಲ್ಲವನ್ನು ಪಡೆದು ಸೋಮಯ್ಯಗೊಂಡರಿಗೆ ಧನ್ಯವಾದ ಹೇಳಿ ಅಲ್ಲಿಂದ ಮರಳಿದೇವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ