ಉತ್ತರ ಕರ್ನಾಟದ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ ಭಟ್ಕಳದ ಮಜ್ಸಿಸ್-ಎ-ಇಸ್ಲಾಹ್-ವ-ತಂಝೀಮ್
ಉತ್ತರ ಕರ್ನಾಟದ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ ಭಟ್ಕಳದ
ಮಜ್ಸಿಸ್-ಎ-ಇಸ್ಲಾಹ್-ವ-ತಂಝೀಮ್
೧೯೧೨ ರಲ್ಲಿ ನಡೆದ ಬಲ್ಖಾನ್ ಯುದ್ದದಲ್ಲಿ ಉಂಟಾದ ಸಾವು ನೋವುಗಳ ಹಿನ್ನಲೆಯಲ್ಲಿ ಬಲ್ಖಾನ್ ರಿಲೀಫ್ ಕಮಿಟಿಯ ಹೆಸರಿನಲ್ಲಿ ಜನ್ಮತಾಳಿದ ಭಟ್ಕಳದ ಮಜ್ಲಿಸೆ-ಎ-ಇಸ್ಲಾಹ್-ವ-ತಂಝೀಮ್ ಅಂದಿನಿಂದ ಇಂದಿನವರೆಗೂ ಪ್ರಕೃತಿ ವಿಕೋಪಗಳೇ ಆಗಲಿ, ನೆರೆ ಹಾವಳಿಯಾಗಲಿ, ಗಲಭೆಗಳಿಂದ ಜನರು ಸಂತೃಸ್ತರಾಗಲಿ ಅಲ್ಲಿ ತಂಝೀಮ್ ನೀಯೋಗ ಸಹಾಯಕ್ಕಾಗಿ ಧಾವಿಸಿ ಬರುತ್ತದೆ.
ಇತ್ತಿಚೆಗೆ ಉತ್ತರ ಕರ್ನಾಟಕದ ಸುಮಾರು ಎಂಟು ಜಿಲ್ಲೆಗಳಲ್ಲಿ ಉಂಟಾದ ನೆರೆಹಾವಳಿಯಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿದ್ದನ್ನು ಯಾರು ಕೂಡ ಮರೆಯುವಂತಿಲ್ಲ. ಭಟ್ಕಳದಿಂದ ದೂರದ ಬಾಗಲಕೋಟೆ ಬಿಜಾಪೂರ ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ಕೈಗೊಂಡ ತಂಝೀಮ್ ಅಲ್ಲಿನ ಸಂತೃಸ್ತರಿಗೆ ತನ್ನ ನೆರವಿನ ಹಸ್ತವನ್ನು ಚಾಚಿದೆ.
ಭಟ್ಕಳದಂತ ಚಿಕ್ಕ ಊರಿನಲ್ಲಿರುವ ಈ ಜನರ ಹೃದಯ ಮಾತ್ರ ದೊಡ್ಡದು ಸಂತೃಸ್ತರ ದುರ್ಬಲರ, ಸಮಾಜದಲ್ಲಿ ನಿಕೃಷ್ಟರಾದವರ ಪರವಾಗಿ ಸದಾ ಮಿಡಿಯುವ ಇವರ ಹೃದಯವು ದೇಶದ ಯಾವುದೇ ಭಾಗದಲ್ಲಿ ಏನಾದರೂ ಆಗಲಿ ಅಲ್ಲಿ ಜಾತಿ,ಮತ ಬೇಧವೆನ್ನದೆ ಪರಿಹಾರ ಕಾರ್ಯವನ್ನು ಕೈಗೊಂಡು ಮಾನವೀಯತೆಯನ್ನು ಮೆರೆಯುವ ಈ ಜನ ನಿಜಕ್ಕೂ ನಮ್ಮ ರಾಜ್ಯಕ್ಕೆ ಮಾದರಿಯಾಗಬಲ್ಲರು.
ಒಂದು ರೀತಿಯಲ್ಲಿ ಹೇಳಬೇಕಾದರೆ ತಂಝೀಮ್ ಹುಟ್ಟಿಕೊಂಡಿದ್ದೆ ಸಂತೃಸ್ತರಿಗೆ ಪರಿಹಾರವನ್ನು ನೀಡಲು, ಅವರ ದುಃಖದಲ್ಲಿ ಶಾಮೀಲಾಗಲು ಎಂದರೆ ತಪ್ಪಾಗಲಾರದು. ಬಲ್ಖಾನ್ ಯುದ್ದದಲ್ಲಿ ಸಂತೃಸ್ತರಾದವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಬಲ್ಖಾನ್ ರಿಲೀಫ್ ಕಮಿಟಿಯು ಮುಂದೆ ತನ್ನ ಬೇರನ್ನು ಗಟ್ಟಿಗೊಳಿಸಿ ದಿವಂಗತ ಐ.ಎಚ್.ಸಿದ್ದೀಖಿ ಯವರ ನೇತೃತ್ವದಲ್ಲಿ ೧೯೩೭ರಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಎಂಬ ಹೆಸರಿನಲ್ಲಿ ಪೂರ್ಣಪ್ರಮಾಣದ ಒಂದು ಸಾಮಾಜಿಕ,ರಾಜಕೀಯ ಸಂಸ್ಥೆಯಾಗಿ ರೂಪುಗೊಂಡಿತು.
೧೯೩೭ರಲ್ಲಿ ಬಂದೆರಗಿದ ಮಹಾಪೂರವಾಗಲಿ, ೧೯೬೪ರಲ್ಲಿ ಉಂಟಾದ ಚಂಡಮಾರುತವಾಗಲಿ ಇದರಲ್ಲಿ ಮನೆಮಾರುಗಳನ್ನು ಕಳೆದುಕೊಂಡ ಸಾವಿರಾರು ಜನರಿಗೆ ತಂಝೀಮ್ ತನ್ನ ನೆರವಿನ ಹಸ್ತವನ್ನು ನೀಡಿತು. ಕೋಮು ಗಲಭೆಯೆ ಆಗಲಿ,ಪ್ರಕೃತಿ ವಿಕೋಪಗಳೇ ಸಂಭವಿಸಲಿ ತಂಝಿಮ್ ನ ರಿಲೀಫ್ ತಂಡ ಅಲ್ಲಿ ಹಾಜರಾಗುತ್ತೆ ಮತ್ತು ಅಲ್ಲಿನ ಸಂತೃಸ್ತರಿಗೆ ಪರಿಹಾರವನ್ನು ಒದಗಿಸುತ್ತದೆ. ಪರಿಹಾರ ನೀಡುವಲ್ಲಿ ಇದು ಯಾವುದೇ ಜಾತಿ-ಬೇಧವನ್ನು ಮಾಡದೆ ಎಲ್ಲರಿಗೂ ಸಮಾನ ರೀತಿಯಲ್ಲಿ ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕಾರ್ಯರೂಪಕ್ಕಿಳಿಯುತ್ತದೆ. ಗುಜರಾತಿನಲ್ಲಿ ಸಂಭವಿಸಿದ ಭೀಕರ ಪ್ರಳಯ, ಸುನಾಮಿಯ ಅಲೆಗಳಲ್ಲಿ ಸಿಲುಕಿ ತಮ್ಮ ಮನೆಮಠಗಳನ್ನು ಕಳೆದುಕೊಂಡವರ ಬದುಕಿಗೆ ಮರಳಿ ಜೀವ ತುಂಬಿದ ಕೀರ್ತಿ ಈ ತಂಝೀಮ್‌ನದು. ದೂgದ ಗುಜರಾತ್, ಚೆನೈಗಳಿಗೆ ಭಟ್ಕಳದಿಂದ ತೆರಳಿದ ರಿಲೀಫ್ ತಂಡ ಅಲ್ಲಿ ಹಲವಾರು ದಿನಗಳಿದ್ದು ತಮ್ಮ ಕೈಯ್ಯಾರೆ ಮನೆಗಳನ್ನು ನಿರ್ಮಿಸಿ ಅವರಿಗೆ ಮರಳಿ ಬದುಕನ್ನು ನೀಡಿದರು. ಅವರಿಗೊಂದು ಸೂರು ಒದಗಿಸಿಕೊಟ್ಟು ಮಾನವೀಯತೆಯನ್ನು ಮರೆದರು.
ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳು ನೆರೆಹಾವಳಿಯಿಂದಾಗಿ ತತ್ತರಿಸಿ ಹೋಗಿದ್ದು ಮೊದಲೆ ಬಡತನದಿಂದ ಬೆಂದು ಹೋಗಿದ್ದ ಜನತೆಗೆ ಪ್ರಕೃತಿಯು ನೀಡಿದ ಹೊಡೆತವನ್ನು ತಾಳದೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹಾತೊರೆಯುತ್ತಿದ್ದ ಬಾಗಲಕೋಟೆ ಬಿಜಾಪೂರ ಜಿಲ್ಲೆಯ ಜನತೆಗೆ ತಂಝೀಮ್ ಮತ್ತೆ ತನ್ನ ನೆರವಿನ ಹಸ್ತವನ್ನು ಚಾಚಿ ಮಾನವೀಯತೆಯನ್ನು ಮೆರೆದಿದೆ. ಎರಡೆರಡು ಬಾರಿ ಸ್ವತಃ ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಖಾಲಿದ್, ಅಬ್ದುಲ್ಲಾ ದಾಮೂದಿಯವರ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಜನರ ತಂಡ ನೆರೆಪೀಡಿತ ಬಾಗಲಕೋಟೆ, ಬಿಜಾಪೂರ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿದ್ದು ಅಲ್ಲಿ ಸಮರ್ಪಕವಾದ ಸಮೀಕ್ಷೆಯನ್ನು ನಡೆಸಿ ಯಾರು ಯಾರು ಪರಿಹಾರವನ್ನು ಪಡೆಯಲು ಆರ್ಹರೂ ಎಂಬುದನ್ನು ಮನದಟ್ಟಾದ ಮೇಲೆ ಅವರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟದ್ದಲ್ಲದೆ ದಿನಬಳಕೆಯ ವಸ್ತುಗಳನ್ನು ನೀಡಿದ್ದಾರೆ. ಇದು ತಂಝೀಮ್‌ನ ನಿಸ್ವಾರ್ಥ ಸೇವೆ ಎಂದೇ ಹೇಳಬಹುದು. ಏಕೆಂದರೆ ನೆರೆಯ ಸಂದರ್ಭದಲ್ಲಿ ಕೇವಲ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅದೆಷ್ಟೋ ಜನ ಸ್ವಯಂಘೋಷಿತ ಸಮಾಜ ಸೇವಕರು ಸಂತೃಸ್ತರೊಂದಿಗೆ ನಿಂತುಕೊಂಡು ಪತ್ರಿಕೆಯಲ್ಲಿ ಫೋಜು ಕೊಡುವುದನ್ನು ನಾವು ಕಂಡಿದ್ದೇವೆ ಆದರೆ ತಂಝೀಮ್ ಇಷ್ಟೆಲ್ಲ ಮಾಡಿಯು ಎಲ್ಲಿಯು ಕೂಡ ತಾನು ಮಾಡಿದ ಕಾರ್ಯದ ಬಗ್ಗೆ ಹೇಳಿಕೊಳ್ಳದೆ ಮಾನವ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ನಿಜಕ್ಕೂ ಪ್ರಶಂಸನೀಯ. ಈ ಕುರಿತು ತಂಝೀಮ್ ನ ಪದಾಧಿಕಾರಿಗಳು ಹೇಳುವುದೆ ಬೇರೆ. ನಾವು ಯಾರಿಗೂ ಖುಷಿಪಡಿಸಲು ಅಥವಾ ಜನರಿಗೆ ತೋರಿಸಿ ಪತ್ರಿಕೆಗಳಲ್ಲಿ ಫೋಟೊ ಪ್ರಕಟಿಸಲು ರಿಲೀಫ್ ಕಾರ್ಯಮಾಡುತ್ತಿಲ್ಲ. ಬದಲಾಗಿ ಮನುಷ್ಯರು ಮನುಷ್ಯರ ಸಹಾಯ ಮಾಡಿದರೆ ದೇವನು ನಮ್ಮ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯೊಂದಿಗೆ ನಾವು ಈ ಸೇವೆಯನ್ನು ಮಾಡುತ್ತಿದ್ದೇವೆ. ಇಸ್ಲಾಮ್ ನಮ್ಮನ್ನು ಮಾನವ ಸೇವೆಯನ್ನು ಕೈಗೊಳ್ಳಲು ಹೇಳುತ್ತದೆ ಆದ್ದರಿಂದ ನಮ್ಮ ಕೈಲಾದ ಮಟ್ಟಿಗೆ ಜನರಲ್ಲಿ ಸೇವಾ ಮನೋಭಾವನೆ ಬೆಳಯುವಂತಾಗಲು ಅವರನ್ನು ಜಾಗೃತಗೊಳಿಸಿ ಸಾಮಾನ್ಯ ಜನರೂ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆಯನ್ನು ಮಾಡುತ್ತೇವೆ ಎನ್ನುತ್ತಾರೆ.
ಜಮಾತೆ ಇಸ್ಲಾಮಿ ಹಿಂದ್ ಉತ್ತರ ಕರ್ನಾಟಕ ಸಂಚಾಲಕ ಮೌಲಾನ ಮುಹಮ್ಮದ್ ಯೂಸೂಫ್ ಕನ್ನಿಯವರ ಮಾಗದರ್ಶನದಲ್ಲಿ ಜ.೨೫ರಂದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ತಂಝೀಮ್ ರಿಲೀಫ್ ತಂಡವು ಹಳೆ ಬಾಗಲಕೋಟೆಯಲ್ಲಿ ಹಿಂದು ಮುಸ್ಲಿಮ್ ಸೇರಿದಂತೆ ಒಟ್ಟು ೫೦ ಮನೆಗಳ ದುರಸ್ತಿ ಕಾರ್ಯವಾಗಬೇಕಿದ್ದನ್ನು ಗುರುತಿಸಿದ್ದಾರೆ.ಅಲ್ಲಿನ ಜಮಾಅತೆ ಇಸ್ಲಾಮಿ ಹಿಂದ್ ನ ಸಹಯೋಗದೊಂದಿಗೆ ೧೦*೨೦ ಯಂತೆ ಎರಡು ಕುಟುಂಬಗಳು ನೆಲೆಸುವ ಮನೆಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ತಂಝಿಮ್ ವಹಿಸಿಕೊಂಡಿದೆ. ಇದರಂತೆ ಇಲಕಲ್, ಕಂದಗಲ್,ನಂದವಾಡಿ,ಮುದ್ಗಲ್, ಕರ್ಕಳಿ, ವರ್ವಿ,ಕುರ್ಲಕೇರಿ,ಯಾಲೂರು, ಗಳಲ್ಲಿ ಸಮೀಕ್ಷೆ ನಡೆಸಿದ ತಂಡವು ಅಲ್ಲಿನ ಬಹುತೇಕ ಭಾಗಶಃ ಮತ್ತು ಅಲ್ಪ ಸ್ವಲ್ಪ ಮುರಿದು ಬಿದ್ದ ಮನೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಕುರಿತು ಯೋಜನೆಯನ್ನು ರೂಪಿಸಲಾಗಿದ್ದು ಇನ್ನಷ್ಟು ಸರ್ವೆ ಕಾರ್ಯ ಆಗಬೇಕಿದೆ ಎಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್ ತಿಳಿಸಿದರು. ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳ, ಗುಲ್ಬರ್ಗಾ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಇನ್ನು ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು ಹಂತಹಂತವಾಗಿ ಮನೆಗಳ ನಿರ್ಮಾಣ, ಹಾಗೂ ಪುನರ್ ವಸತಿಯನ್ನು ಕಲ್ಪಿಸುವುದಾಗಿ ತಂಝೀಮ್ ಕಾರ್ಯನೀತಿಯನ್ನು ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರಥಮಾ ಹಂತದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲಿ ಎರಡು ಕುಟುಂಬ ವಾಸಿಸುವಂತಹ ೨೫ ನೂತನ ಮನೆಗಳ ನಿರ್ಮಾಣದ ಹೋಣೆಯನ್ನು ತಂಝೀಮ್ ವಹಿಸಿಕೊಂಡಿದ್ದು ಇದು ಒಂದು ತಿಂಗಳೊಳಗೆ ಪೂರ್ಣಗೊಳ್ಳುತ್ತದೆ ಇದಕ್ಕಾಗಿ ಸುಮಾರು ೧೬ ಲಕ್ಷ ರೂ ಖರ್ಚಾಗುವ ಅಂದಜು ಇದೆ. ಮುಂದಿನ ಹಂತವಾಗಿ ಮತ್ತಷ್ಟು ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ