ಭಟ್ಕಳ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ; ೨೩ರಲ್ಲಿ ೧೩ವಾರ್ಡುಗಳಿಗೆ ಅವಿರೋಧ ಆಯ್ಕೆ
ಭಟ್ಕಳ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ; ೨೩ರಲ್ಲಿ ೧೩ವಾರ್ಡುಗಳಿಗೆ ಅವಿರೋಧ ಆಯ್ಕೆ
ಮೊಹಲ್ಲಾದ ಮಸೀದಿ ಕಮಿಟಿಗಳೇ ಇಲ್ಲಿ ಹೈಕಮಾಂಡ್
*ಮುಹಮ್ಮದ್ ರಝಾ ಮಾನ್ವಿ
ಚುನಾವಣೆಯಲ್ಲಿ ಮರಾಮಾರಿ, ಟಿಕೆಟಿಗಾಗಿ ಪೈಪೋಟಿ ಇದ್ದದ್ದೇ. ಇದೇ ಸುದ್ದಿಗಳು ಚುನಾವಣೆ ಮುಗಿಯುವವರೆಗೂ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುತ್ತವೆ. ಆದರೆ ಹೊಡೆದಾಟ ಬಡಿದಾಟದ ಸುದ್ದಿಗಳು ಎಲ್ಲೂ ಕಾಣ ಸಿಗುವುದಿಲ್ಲ.
ಈಗ ಮತ್ತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಇಲ್ಲಿಯೂ ಜನರು ತಮ್ಮ ತಮ್ಮ ಪಕ್ಷದ ಬ್ಯಾನರ್ ನಡಿ ತಮ್ಮದೆ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಹರಸಹಾಸಕ್ಕಿಳಿದ್ದಿದ್ದಾರೆ. ಎಲ್ಲೋ ಒಂದೆರೆಡು ಕಡೆ ಅಭ್ಯರ್ಥಿಗಳ ಕೊರತೆಯಿಂದಲೂ ಅಥವಾ ಆ ವಾರ್ಡಿನ ವ್ಯಕ್ತಿಯ ವರ್ಚಸ್ಸಿನಿಂದಲೂ ಅವಿರೋಧ ಆಯ್ಕೆಗಳು ನಡೆಯುತ್ತವೆ. ಆದರೆ ಯೋಜಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಆ ವಾರ್ಡಿನ ಜನತೆ ಮುಂದೆ ನಿಂತು ತಮ್ಮ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ವಿರಳ ಮತ್ತು ಅಪರೂಪ.
ಪಂಚಾಯತ್, ಹಾಗೂ ಪುರಸಭೆ ಚುನಾವಣೆಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಗೆಲುವು ಸಾಧಿಸಿ ತಮ್ಮ ಅಧಿಕಾರವಧಿಯಲ್ಲ ಆ ಹಣವನ್ನು ಮರುಪೂರಣಗೊಳಿಸಲು ಹೆಣಗಾಡುತ್ತಿರುವ ಎಷ್ಟೋ ಮಂದಿ ಜನಪ್ರತಿನಿಧಿಗಳು ನಾವು ಕಂಡಿಲ್ಲ? ಯಾವುದೇ ಆಯ್ಕೆಗೊಂಡ ವ್ಯಕ್ತಿ ಸಾಮಾಜಿಕ ತುಡಿತ ಹಾಗೂ ಕಳಕಳಿಯಿಮದ ತನ್ನ ವಾರ್ಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾನೆ? ಅಥವಾ ಆ ವ್ಯಕ್ತಿಯ ಕೊರಳುಪಟ್ಟಿ ಹಿಡಿದು ಕೇಳುವ ಧೈರ್ಯ ಯಾರಿಗೆ ತಾನೆ ಇದೆ?
ಅಂತಹ ಧೈರ್ಯ ಮಾಡುವ ವ್ಯಕ್ತಿಗಳು ಭಟ್ಕಳದಲ್ಲಿದ್ದಾರೆ. ಏಕೆಂದರೆ ಇಲ್ಲಿನ ೨೩ವಾರ್ಡುಗಳಲ್ಲಿ ೧೩ವಾರ್ಡಿನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಂದರೆ ಆಯಾ ವಾರ್ಡಿನ ಜನರೇ ಮುಂದೆ ತಮ್ಮ ಸೇವಕನನ್ನು ಆರಿಸುತ್ತಾರೆ. ಆತನಿಂದ ತಮ್ಮ ವಾರ್ಡಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಆತನು ಸ್ವಲ್ಪವೂ ಎಡವಿದರೆ ಕಿವಿ ಹಿಂಡುವ ಕೆಲಸವನ್ನು ಮಾಡುತ್ತಾರೆ.
ಭಟ್ಕಳದ ಪುರಸಭೆ ಚುನಾವಣೆ ರಾಜ್ಯಕ್ಕೆ ಮಾದರಿ ಎಂಬಂತೆ ಇಲ್ಲಿ ಯಾವುದೇ ಗಲಾಟೆ, ಗೌಜು, ಗದ್ದಲ ವಿಲ್ಲ. ಅಭ್ಯರ್ಥಿಗಳಲ್ಲಿ ಪೈಪೋಟಿ ಇಲ್ಲ. ಯಾರು ಸ್ವಚ್ಚ ಹಾಗೂ ಜನರ ಸೇವೆ ಮಾಡುವ ಗುಣ ಹೊಂದಿದ್ದಾರುವರೋ ಅಂತಹವರನ್ನು ಜನರೇ ಗುರುತಿಸಿ ಒಮ್ಮತದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ. ಮತ್ತೆ ಆ ವ್ಯಕ್ತಿಯ ವಿರುದ್ಧ ಯಾವ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವುದಿಲ್ಲ. ಒಂದು ವೇಳೆ ಸಲ್ಲಿಸಿದ್ದೆ ಆದಲ್ಲಿ ಆತನು ಮಣ್ಣು ಮುಕ್ಕುವುದಂತೋ ಖಚಿತ.
ಹೀಗೆ ಭಟ್ಕಳದ ೨೩ವಾರ್ಡುಗಳಲ್ಲಿ ಇಲ್ಲಿನ ಬಹುಸಂಖ್ಯಾತ ಮುಸ್ಲಿಮರಿರುವ ೧೩ವಾರ್ಡುಗಳ ಜನ ತಮ್ಮ ಸೇವಕನನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ. ಚುನಾವಣೆಗೆ ನಿಲ್ಲಬಯಸುವ ವ್ಯಕ್ತಿ ಮಾತ್ರ ಅದಕ್ಕೆ ಆರ್ಹತೆಯನ್ನು ಹೊಂದಿರಬೆಕು. ಇಲ್ಲಿ ಆರ್ಹತೆ ಎಂದರೆ ಹಣ ಮತ್ತು ಜನ ಬಲ ಅಲ್ಲ. ಬದಲಾಗಿ ತಾನು ಜನರ ಸೇವಕನಾಗಿ ಎಷ್ಟರ ಮಟ್ಟಿಗೆ ಕರ್ತವ್ಯ ನಿರ್ವಹಿಸಬಲ್ಲೇನು ಎನ್ನುವ ಆತ್ಮ ವಿಶ್ವಾಸ ಇದ್ದರೆ ಸಾಕು. ಮತ್ತೆ ಆತನು ಒಂದು ಪೈಸೆ ಖರ್ಚು ಮಾಡಬೇಕಾಗಿಲ್ಲ. ಎಲ್ಲವನ್ನು ಆ ವಾರ್ಡಿನ ಜನರೆ ನೋಡಿಕೊಳ್ಳುತ್ತಾರೆ. ಇದಕ್ಕೆ ಇಲ್ಲಿನ ಸಮಾಜಿಕ, ರಾಜಕೀಯ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್ ತಂಝೀಮ್ ಬಹುಮುಖ್ಯವಾದ ಪಾತ್ರ ವಹಿಸುತ್ತದೆ.
ಮಸೀದಿ ಜಮಾಅತ್‌ಗಳ ಕೊಡುಗೆ: ಇಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲು ಇಲ್ಲಿನ ಮಸೀದಿ ಜಮಾಅತ್ ಗಳು ವ್ಯವಸ್ಥಿತ ಯೋಜನೆಯನ್ನು ಮಾಡಿಕೊಂಡಿವೆ. ಚುನಾವಣೆ ಘೋಷಣೆಯಾದಾಗಲೆ ವಾರ್ಡಿನಿಂದ ಚುನವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಮಸೀದಿಯ ಅಧ್ಯಕ್ಷ/ಕಾರ್ಯದರ್ಶಿಗೆ ಮನವಿ ಸಲ್ಲಿಸುತ್ತಾರೆ. ಮತ್ತು ತಾನು ಈ ವಾರ್ಡಿನ ಅಭಿವೃದ್ಧಿಗಾಗಿ ಏನು ಮಾಡಬಹುದು ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆಯುತ್ತವೆ. ಆಕಾಂಕ್ಷಿಗಳು ಇಬ್ಬರು ಮೂವರಾದರೆ ಮಸೀದಿ ಕಮಿಟಿ ಸಭೆ ಸೇರಿ ಆರ್ಹ ಅಭ್ಯರ್ಥಿಯ ಹೆಸರನ್ನು ಘೋಷಿಸುತ್ತಾರೆ. ಮತ್ತು ಆ ವ್ಯಕ್ತಿಯ ವಿರುದ್ಧ ಬೇರೆ ಯಾರೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸು ಮಾಡುವುದಿಲ್ಲ. ಏಕೆಂದರೆ ಇದು ಸಮುದಾಯದ ಐಕ್ಯತೆ ಪ್ರಶ್ನೆ. ಇಲ್ಲಿ ಸಮುದಾಯವನ್ನು ಒಂದುಗೂಡಿಸಿಡುವಲ್ಲಿ ಮಸೀದಿಗಳ ಕೊಡುಗೆ ಅಪಾರ ಎಂದೆ ಹೇಳಬಹುದು.
ಒಂದು ರೀತಿಯಲ್ಲಿ ಈ ಮಸೀದಿಗಳ ಜಮಾಅತ್ ಅಧ್ಯಕ್ಷರು ಹಾಗೂ ಮಸೀದಿ ಕಮಿಟಿಯೇ ಅಭ್ಯರ್ಥಿಯ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತವೆ. ತಮ್ಮ ಮೊಹಲ್ಲದಿಂದ ಇಂತಹ ವ್ಯಕ್ತಿಯನ್ನು ತಾವು ಒಮ್ಮತದ ಅಭ್ಯರ್ಥಿ ಎಂದು ಆಯ್ಕೆ ಮಾಡಿ ತಂಝೀಮ್ ಕಚೇರಿಗೆ ಕಳುಹಿಸುತ್ತಾರೆ. ತಂಝೀಮ್ ಆಡಳಿತ ಆ ವ್ಯಕ್ತಿಯ ಹೆಸರನ್ನು ಅಂತಿಮಗೊಳಿಸುತ್ತದೆ. ಒಮ್ಮೆ ತಂಝೀಮ್ ಯಾವುದೇ ವ್ಯಕ್ತಿಯ ಕುರಿತಂತೆ ನಿರ್ಣಯ ಕೈಗೊಂಡರೆ ಮತ್ತೇ ಆ ವ್ಯಕ್ತಿಯ ವಿರುದ್ಧ ಯಾವುದೇ ಅಭ್ಯರ್ಥಿ ನಿಲ್ಲುವ ಮನಸ್ಸು ಮಾಡುವುದಿಲ್ಲ. ಹಾಗೇನಾದರೂ ಯಾರದೂ ಬಾಹ್ಯ ಒತ್ತಡಕ್ಕೆ ಮಣಿದು ತಂಝಿಮ್ ನಿರ್ಣಯದ ವಿರುದ್ಧ ಸ್ಪರ್ಧಿಸಿದರೂ ಅಲ್ಲಿ ಅವನಿಗೆ ತಮ್ಮ ಓಟಿನ ಹೊರತು ಆತನ ಮನೆಯವರ ಓಟು ಸಿಗುವುದು ಕಷ್ಟ. ಆದ್ದರಿಂದ ತಂಝೀಮ್ ನಿರ್ಣಯವನ್ನು ಗೌರವಿಸಿ ಜನರು ಒಮ್ಮತದ ಅಭ್ಯರ್ಥಿಯನ್ನೆ ಆಯ್ಕೆ ಮಾಡಿ ಕಳುಹಿಸುತ್ತಾರೆ.
ಸಮಯ ಹಾಗೂ ಹಣದ ಉಳಿತಾಯ: ಇಂತಹ ಒಂದು ನಿರ್ಣಯದಿಂದಾಗಿ ಚುನಾವಣಾ ವೆಚ್ಚವು ಬಹಳ ಕಡಿಮೆಯಾಗುತ್ತದೆ. ಕೇವಲ ೧೦ ವಾರ್ಡುಗಳಲ್ಲಿ ಮಾತ್ರ ಚುನಾವಣೆ ನಡೆಯುವುದರಿಂದ ಸಿಬಂಧಿಯ ಖರ್ಚು ವೆಚ್ಚ ಹಾಗೂ ಸಮಯದ ಉಳಿತಾಯ ತನ್ನಿಂದ ತಾನೆ ಆಗುತ್ತದೆ. ಅದಕ್ಕಾಗಿಯೆ ಭಟ್ಕಳ ಪುರಸಭೆ ಚುನಾವಣೆಯು ರಾಜ್ಯಕ್ಕೆ ಒಂದು ಮಾದರಿ ಎಂದೇ ಹೇಳಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ