ಮೂರು ತಿಂಗಳ ನಂತರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ


ಮೂರು ತಿಂಗಳ ನಂತರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ
ಭಟ್ಕಳ:೨೮ ಮೂರು ತಿಂಗಳ ಬಳಿಕ ನಡೆದ ಬಳಿಕ ಜರುಗಿದ ಭಟ್ಕಳ ಪುರಸಭೆಯ ಸಾಮಾನ್ಯ ಸಭೆಯು ಹಲವು ಬಿಸಿಬಿಸಿ ಚರ್ಚೆ, ಸದಸ್ಯರ ವಾಗ್ವಾದಗಳಿಂದ ಕೂಡಿ ಸ್ವಾರಸ್ಯಕರವಾಗಿತ್ತು. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು ಮತ್ತು ಸದಸ್ಯರ ಮಧ್ಯೆ ವಾಗ್ವಾದವೂ ಉಂಟಾಯಿತು.
ಸಾಗರ ರಸ್ತೆಯ ಗೋಳಿ ಕಟ್ಟೆಯ ಬಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸದಸ್ಯರ ಗಮನಕ್ಕೆ ತರದೇ ಲಕ್ಷಾಂತರ ರೂಪಾಯಿ ಬಿಡುಗಡೆ ಮಾಡಲಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಇನಾಯತುಲ್ಲಾ ಶಾಬಂದ್ರಿ ಅಧ್ಯಕ್ಷರು ಸಭೆಯಲ್ಲಿ ಠರಾವು ಮಾಡದೇ ಈ ರೀತಿ ಹಣ ಬಿಡುಗಡೆ ಮಾಡುವುದು ಸರಿಯಲ್ಲ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷ ಪರ್ವೇಜ್ ಕಾಶೀಂ ಜಿ ಬಿಡುಗಡೆಗೊಳಿಸಲಾದ ಹಣ ಬಾಕಿ ಇದ್ದ ಕುಡ್ಸೆಂಪ ಹಣವಾಗಿದೆ. ಈ ಹಿಂದೆ ಈ ಹಣ ವಾಪಾಸ್ ಹೋಗಿದ್ದು, ಮತ್ತೆ ಬಂದಿದ್ದರಿಂದ ಕಾಮಗಾರಿ ನಡೆಯುವಂತಾಗಿದೆ. ಇದೆಲ್ಲಾ ವಿಷಯವೂ ಸದಸ್ಯರಿಗೆ ಗೊತ್ತಿದೆ ಎಂದು ಸಮಜಾಯಿಸಿದರು. ಅಧ್ಯಕ್ಷರ ಉತ್ತರಕ್ಕೆ ತೃಪ್ತರಾಗದ ಶಾಬಂದ್ರಿ ಈ ಬಗ್ಗೆ ಠರಾವಿನಲ್ಲಿ ಸೇರ್ಪಡೆ ಮಾಡಬೇಕಿತ್ತು ಎಂದು ಹೇಳಿದರು.
ಪುರಸಭೆಯಲ್ಲಿ ಕಂಪ್ಯೂಟರ್ ನೀಡಿಕೆಯಲ್ಲಿ ಅವ್ಯವಹಾರ ಮಾಡಿದವರಿಗೆ ಪುನ: ಗುತ್ತಿಗೆ ನೀಡಲಾಗಿದೆ. ನಗರದಲ್ಲಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಕಂಪ್ಯೂಟರ್ ಸರಬರಾಜು ಮಾಡುವವರು ಇಲ್ಲವೇ ಎಂದು ಸದಸ್ಯ ಅಮ್ಜದ್ ಪ್ರಶ್ನಿಸಿದ್ದು ಇದಕ್ಕೆ ಸದಸ್ಯ ಇನಾಯುತಲ್ಲಾ ಧ್ವನಿಗೂಡಿಸಿ ಕಂಪ್ಯೂಟರ್ ನೀಡಿಕೆಯಲ್ಲಿ ಅವ್ಯವಹಾರ ಮಾಡಿದವರಿಗೆ ಮತ್ತೆ ಟೆಂಡರ್ ಹಾಕಲು ಅವಕಾಶ ನೀಡಿದ್ದರಲ್ಲಿ ಕೆಲವು ಅಧಿಕಾರಿಗಳ ಕೈ ಇದೆ ಎಂದು ಆರೋಪಿಸಿದರು.
ಕೆಲವು ಕಡೆ ಪುರಸಭೆಯ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣದಾರರ ವಿರುದ್ದ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸಭೆಗೆ ತಿಳಿಸಬೇಕು ಎಂದು ಕೆಲವು ಸದಸ್ಯರು ಪಟ್ಟು ಹಿಡಿದರು. ಮುಖ್ಯಮಂತ್ರಿ ಪಟ್ಟಣ ಅಭಿವೃದ್ದಿ ಯೋಜನೆಯಡಿಯಲ್ಲಿ ಕಾಮಗಾರಿಗೆ ಎಸ್ ಆರ್ ದರಕ್ಕಿಂತ ಹೆಚ್ಚು ಹಣ ನೀಡಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದ್ದು, ಇದಕ್ಕೆ ಪುರಸಭೆ ಅವಕಾಶ ಕಲ್ಪಿಸಿಲ್ಲ. ಇದರಿಂದ ಪುರಸಭೆಗೆ ಸುಮಾರು ೨೫ ಲಕ್ಷಕ್ಕೂ ಹಣ ಉಳಿತಾಯವಾಗಿದೆ. ಈ ಹಣ ಉಳಿತಾಯದ ಬಗ್ಗೆ ಠರಾವಿನಲ್ಲಿ ಯಾಕೆ ಸೇರ್ಪಡೆಗೊಳಿಸಿಲ್ಲ ಎಂದು ಸನಾವುಲ್ಲಾ ಗವಾಯಿ ಹಾಗೂ ಇನಾಯತುಲ್ಲಾ ಶಾಬಂದ್ರಿ ಅಧ್ಯಕ್ಷರನ್ನು ಪ್ರಶ್ನಿಸಿದರು. ಸಭೆಯನ್ನು ಮೂರು ತಿಂಗಳಿಗೊಮ್ಮೆ ಕರೆದರೆ ಅಭಿವೃದ್ದಿಯ ಕುರಿತು ಚರ್ಚೆ ನಡೆಸಲು ಆಗುವುದಿಲ್ಲ. ಇನ್ನು ಮುಂದೆ ತಿಂಗಳಿಗೊಮ್ಮೆ ಸಭೆಯನ್ನು ಕಡ್ಡಾಯವಾಗಿ ಕರೆಯಲೇ ಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮುಖ್ಯಾಧಿಕಾರಿ ಕೃಷ್ಣಪ್ಪ ಕುಡಿಯುವ ನೀರಿನ ಕರವನ್ನು ಹೆಚ್ಚಿಸುವುದರ ಕುರಿತು ಸಭೆಯ ಗಮನ ಸಳೆದಾಗ ಸ್ಥಾಯಿ ಸಮಿತಿಯ ಅಧ್ಯಕ್ಷ ಅಲ್ತಾಫ್ ಖರೂರಿ ಸೇರಿದಂತೆ ಎಲ್ಲಾ ಸದಸ್ಯರು ಸದ್ಯಕ್ಕೆ ಈ ವಿಷಯವನ್ನು ಚರ್ಚಿಸುವುದು ಬೇಡ ಎಂದು ಪದೇ ಪದೇ ಈ ವಿಷಯವನ್ನು ಪ್ರಸ್ತಾಪಿಸಿದ ಮುಖ್ಯ ಅಧಿಕಾರಿಯ ಮಾತಿಗೆ ಗಮನ ನೀಡದ ಸದಸ್ಯರು ನೀರಿನ ಕರದ ವಿಷಯವನ್ನು ಮುಂದಕ್ಕೆ ಹಾಕಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು
ನಗರದಲ್ಲಿ ನೂತನವಾಗಿ ಅಳವಡಿಸಲಾದ ಒಳಚರಂಡಿ ಕನೆಕ್ಸನ್ ನೀಡುವ ಕಾರ್ಯ ಆರಂಭಿಸಬೇಕಾಗಿದ್ದು, ಜನರಿಗೆ ಸರಿಯಾದ ರೀತಿಯಲ್ಲಿ ಪ್ರಚಾರದ ಅಗತ್ಯವಿದೆ. ಪ್ರತಿ ಸದಸ್ಯರು ೫೦ ಮನೆಗಳಿಗಾದರೂ ಒಳಚರಂಡಿ ಕನೆಕ್ಸನ್ ನೀಡಲು ಪ್ರೇರೇಪಣೆ ನೀಡಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ