ಜನರಿಲ್ಲದ ಜನಸ್ಪಂಧನ ಸಭೆ, ಶಾಸಕ ಅಸಮಾಧಾನ
ಭಟ್ಕಳ:೨೮ ಶನಿವಾರದಂದು ಬೆಳಿಗ್ಗೆ ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯ ಸಭಾಂಗಣದಲ್ಲಿ ಸೂಸಗಡಿ ಮಟ್ಟದ ಜನಸ್ಪಂದನಾ ಸಭೆಯು ಜರುಗಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ ಜನಸ್ಪಂಧನಾ ಸಭೆಯಲ್ಲಿ ಜನರೇ ಇಲ್ಲದ್ದನ್ನು ಕಂಡು ತೀವ್ರ ಅಸಮಧಾನವನ್ನು ವ್ಯಕ್ತ ಪಡಿಸಿದರು. ಸರಕಾರದ ಯೋಜನೆ ಹಾಗೂ ಜನರ ಸಮಸ್ಯೆಗಳ ಬಗ್ಗೆ ತಿಳಿಯುವಂತಾಗಲು ಜನಸ್ಪಂದನಾ ಸಭೆಯು ಅತಿ ಉಪಯುಕ್ತವಾಗಿದ್ದು ಇಂತಹ ಸಭೆಗಳಲ್ಲಿ ಜನಸಾಮನ್ಯರು ಹಚ್ಚಾಗಿ ಪಾಲ್ಗೊಳ್ಳುವಂತಾಗಬೇಕು ಎಂದರು. ಜಸನ್ಪಂದನಾ ಸಭೆಯಲ್ಲಿ ಜನರಿಗೆ ಸರಕಾರದ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ,ಯೋಜನೆಯ ಕುರಿತು ಅರಿವು ಹಾಗೂ ಊರಿನ ಸಮಸ್ಯೆಗಳ ಪರಿಹಾರದ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಇಂತಹ ಸಭೆಗಳಿಗೆ ಸಮರ್ಪಕ ಪ್ರಚಾರ ನೀಡಿದರೆ ಜನರ ಪಾಲ್ಗೊಳ್ಳುವಿಕೆಯು ಹೆಚ್ಚಾಗುತ್ತದೆ ಆದ್ದರಿಂದ ಇಂತಹ ಸಭೆಗಳ ಕುರಿತು ಹೆಚ್ಚಿನ ಪ್ರಚಾರವನ್ನು ನೀಡಬೇಕೆಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಭಟ್ಕಳ ತಾಲೂಕಿನಲ್ಲಿ ಪಡಿತರ ಚೀಟಿಯ ಸಮಸ್ಯೆ ಇದ್ದು ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ಕೂಡಲೇ ಸರಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು. ನಿಜವಾದ ಫಲಾನುಭವಿಗಳಿಗೆ ಬಿ ಪಿ ಎಲ್ ಕಾರ್ಡ ಸಿಗುವಂತಾಗಬೇಕು ಎಂದ ಅವರು ತಾಲೂಕಿನಲ್ಲಿ ಶೇ.೩೦ ರಷ್ಟು ಅನರ್ಹರು ಬಿ ಪಿ ಎಲ್ ಕಾರ್ಡ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಈ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಬಿಪಿ‌ಎಲ್ ಕಾರ್ಡ ವಂಚಿತ ಬಡವರಿಗೆ ಕಾರ್ಡ ನೀಡುವ ಕೆಲಸ ಮಾಡಬೇಕು ಎಂದರು. ಕಾರ್ಡ ನೀಡುವ ಗುತ್ತಿಗೆ ಪಡೆದ ಕಾಮೆಟ್ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಕಾರ್ಡನಲ್ಲಿ ಯಾರದೋ ಪೋಟೋ, ಯಾರದೋ ವಿಳಾಸ ಸೇರಿದಂತೆ ಅನೇಕ ಲೋಪದೋಷಗಳನ್ನು ಮಾಡಲಾಗಿದೆ. ಇದೆಲ್ಲಾ ಕೂಡಲೇ ಸರಿಪಡಿಸಬೇಕಿದೆ ಎಂzರು. ಕೇಂದ್ರ ಸರಕಾರ ಬಡವರಿಗೆ ಮನೆ ಕಟ್ಟಲು ಅನುಕೂಲವಾಗುವಂತೆ ನಮ್ಮ ಮನೆ ಎಂಬ ನೂತನ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ೧ ಲಕ್ಷ ರೂ ನೀಡುತ್ತಿದ್ದು, ಶೇ.೮ ರ ಬಡ್ಡಿ ದರದಲ್ಲಿ ಹಣ ಮರುಪಾವತಿ ಮಾಡಬೇಕಾಗಿದ್ದು, ಕೇಂದ್ರ ಸರಕಾರ ಶೇ.೫, ಫಲಾನುಭವಿಗಳು ಶೇ.೩ ಬಡ್ಡಿ ತುಂಬಬೇಕಿದೆ. ಈ ಯೋಜನೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು. ತಾಲೂಕಿನಲ್ಲಿ ಕೆಲವು ಕಡೆ ಶಾಲಾ ಪಕ್ಕದಲ್ಲಿ ಮದ್ಯ ಮಾರಾಟ ಅನಧಿಕೃತವಾಗಿ ನಡೆಯುತ್ತಿದೆ. ಗೋವಾದ ಮದ್ಯ ಎಲ್ಲಿ ಬೇಕೆಂದರಲ್ಲಿ ಸಿಗುತ್ತಿದೆ. ಅನಧಿಕೃತ ಮದ್ಯ ಮಾರಾಟದ ಬಗ್ಗೆ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಮದ್ಯ ಮಾರಾಟ ಮಾಡುವ ಪರವಾನಿಗೆ ಇದ್ದವರೂ ಮಾತ್ರ ಮದ್ಯ ಮಾರಾಟ ಮಾಡಬೇಕೇ ಹೊರತು ಬೇಕಾಬಿಟ್ಟಿಯಾಗಿ ಹೊಟೆಲ್‌ಗಳಲ್ಲಿ ಮಾರಾಟ ಮಾಡಲು ಬಿಡಬಾರದು. ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಹೊಟೆಲ್‌ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಹಾಡುವಳ್ಳಿಯಲ್ಲಿ ಉಲ್ಬಣಿಸಿರುವ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಅಲ್ಲಿನ ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದ ಅವರು ಭಟ್ಕಳದಲ್ಲಿ ಸಬ್ ರಜಿಸ್ಟ್ರಾರ್ ಕಚೇರಿ ಎಪ್ರಿಲ್ ಮೊದಲ ವಾರದಲ್ಲಿ ಆರಂಭಗೊಳ್ಳುವ ವಿಶ್ವಾಸವಿದೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ಈ ಸ್ಟಾಂಪಿಂಗ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇದರಿಂದ ಜನರು ಛಾಪಾ ಕಾಗದಕ್ಕಾಗಿ ಅಲೆದಾಡುವುದು ತಪ್ಪುತ್ತದೆ ಎಂದು ಅವರು ಹೇಳಿದರು. ತಹಶೀಲ್ದಾರ ಎಂ ಎಮ್ ನಾಯ್ಕ ಕಂದಾಯ ಇಲಾಖೆಯ ಯೋಜನೆಯ ಕುರಿತು ಹಾಗೂ ಜನಸ್ಪಂದನಾ ಸಭೆಯು ಉದ್ದೇಶದ ಕುರಿತು ವಿವರಿಸಿದರು. ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಪರ್ವೇಜ ಕಾಶೀಂ ಜಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ತಾಪಂ ಅಧ್ಯಕ್ಷೆ ಗೌರಿ ಮೊಗೇರ ಉಪಸ್ಥಿತರಿದ್ದರು, ಉಪತಹಶೀಲ್ದಾರ ಘನಿ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು. ಜನಸ್ಪಂದನಾ ಸಭೆಯಲ್ಲಿ ಜನರಿಗಿಂತ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಭೆಯಲ್ಲಿ ಬೆರಳಣಿಕೆಯ ಜನರು ಮಾತ್ರ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ