ನಮ್ಮ ಕಾಲೇಜು ಹುಡ್ಗೀರು ಎಷ್ಟು ಸೇಫ್ ಆಗಿದ್ದಾರೆ???

ನಮ್ಮ ಕಾಲೇಜು ಹುಡ್ಗೀರು ಎಷ್ಟು ಸೇಫ್ ಆಗಿದ್ದಾರೆ???
ಹೌದು ನಿಜವಾಗ್ಲೂ ಇಂತಹದ್ದೊಂದು ಪ್ರಶ್ನೆ ನಮ್ಮಲ್ಲಿನ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜ. ಇತ್ತಿಚೆಗೆ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಘಟಿಸಿದ ನಂತರವಂತೋ ಇಂತಹ ಪ್ರಶ್ನೆಗಳಿಗೆ ಮತ್ತೊಂದಿಷ್ಟು ಬಲ ಬಂದಂತಾಗಿದೆ.
ನಾವು ವಯಸ್ಸಿಗೆ ಬಂದ ಹುಡುಗಿಯರನ್ನು ಕಾಲೇಜು ಕಳುಹಿಸುವ ನೆಪದಲ್ಲಿ ಮನೆಯಿಂದ ಬಹುದೂರ ಕಳುಹಿಸಿಬಿಡುತ್ತೇವೆ. ಹಾಸ್ಟೆಲ್ಲುಗಳಲ್ಲೊ, ಪೆಯಿಂಗ್ ಗೆಸ್ಟ್ ರೂಪದಲ್ಲೂ ನಮ್ಮ ಮಕ್ಕಳು ನಮ್ಮಿಂದ ಬಹುದೂರ ಹೋಗಿ ವಿದ್ಯಾರ್ಜನೆಯಲ್ಲಿ ತೊಡಗುತ್ತಾರೆ. ಅಲ್ಲಿ ಅವರೇನು ಮಾಡುತ್ತಾರೆ? ಎಂತಹ ತೊಂದರೆಯಲ್ಲಿ ಸಿಕ್ಕುಹಾಕಿಕೊಂಡಿದ್ದಾರೆ? ಅವರು ಸೇಫಾಗಿದ್ದಾರಾ? ಎನ್ನುವ ತಲೆ ಹಿಂಡುವ ಪ್ರಶ್ನೆಗಳ ನಡುವೆಯೂ ನಾವು ಅನಿವಾರ್ಯವಾಗಿ ನಮ್ಮ ಮಕ್ಕಳನ್ನು  ನಮ್ಮಿಂದ ದೂರ ಕಳುಹಿಸುತ್ತೇವೆ. ಆದರೆ ಅವರ ಮನಸ್ಸು ಮಾತ್ರ ತಮ್ಮ ಮಕ್ಕಳ ಕುರಿತಾಗಿಯೆ ಚಿಂತಿಸುತ್ತಿರುತ್ತದೆ. ಇದು ಗಂಡು ಮತ್ತು ಹೆಣ್ಣುಮಕ್ಕಳಿಬ್ಬರಿಗೂ ಅನ್ವಯಿಸುವಂತಹದ್ದು.
ಹೆಣ್ಣುಮಗಳಾದರೆ ಅವಳ ಬಗ್ಗೆ ಹೆಚ್ಚು ಕಾಳಜಿ. ಗಂಡು ಮಗನ ಕುರಿತಂತೆ ಹೆಚ್ಚೇನು ತಲೆಕೆಡಿಸಿಕೊಳ್ಳಲು ಹೋಗಲಾರರು. ಆದರೂ ಕೆಲವು ಪಾಲಕರು ತಮ್ಮ ಮಕ್ಕಳ ಭವಿಷ್ಯ ಕುರಿತಂತೆ ಬಹಳಷ್ಟು ಚಿಂತಿತರಾಗಿರುವುದಂತೂ ಅಷ್ಟೆ ಸತ್ಯ. ನಾವು ಯಾಕೆ ನಮ್ಮ ಮಕ್ಕಳ ಕುರಿತು ಚಿಂತಿಸಬಾರದು? ಕೆಲವರು ಇದನ್ನು ಅತಿಯಾಯಿತೆಂದು ಹೇಳಬಹುದು. ಮಕ್ಕಳ ಕುರಿತಂತೆ ಅಷ್ಟೊಂದು ಕಟ್ಟುನಿಟ್ಟು ಸರಿಯಲ್ಲ ಎಂದು ವಾದಿಸುವ ಕೆಲವು ಪಾಲಕರನ್ನು ನಾವು ಕಂಡಿದ್ದೇವೆ. ಕೆಲವರು ಅತಿ ಎನ್ನುವಂತೆ ವರ್ತಿಸುವವರು ಇದ್ದಾರೆ. ಆದರೆ ಇದಕ್ಕೆಲ್ಲ ಏನು ಪರಿಹಾರ? ನಾವು ನಮ್ಮ ಮಕ್ಕಳ ಕುರಿತಂತೆ ಎಷ್ಟರ ಮಟ್ಟಿಗೆ ಜಾಗೃತಿ ವಹಿಸಬೇಕು ಎನ್ನುವುದೇ ಈಗ ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ.
ಸಿಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲೂ, ಸ್ನೇಹಿತರ ಕೋಣೆಯಲ್ಲೂ, ಪೇಯಿಂಗ್ ಗೆಸ್ಟ್ ಆಗಿಯೋ  ಯಾವುದೇ ರೀತಿಯಲ್ಲಿ ಇದ್ದು ತಮ್ಮ ಓದನ್ನು ಪೂರ್ಣಗೊಳಿಸುತ್ತಾರೆ. ಈ ಸಂದರ್ಭದಲ್ಲಿ ಅವರ ಮುಂದೆ ಹಲವಾರು ಸವಾಲುಗಳು ಇರುತ್ತವೆ. ಹುಡುಗಿಯರಾದರೆ, ಬಾಯ್ ಫ್ರೆಂಡೋ, ಹುಡುಗರಾದರೆ ಗರ್ಲ್ ಫ್ರೆಂಡೊ ಜತೆ ಸೇರಿ ವೀಕ್ ಎಂಡಲ್ಲಿ ಕೆಲವು ಕಡೆ ಸುತ್ತಾಡಿ ಮಜಾ ಮಾಡುತ್ತಾರೆ. ಮೊದ ಮೊದಲು ಬೆಳೆದ ಸ್ನೇಹ ನಂತರ ಅದು ಅವರನ್ನು ವ್ಯಭಿಚಾರ, ಅನೈತಿಕತೆ, ಅತ್ಯಾಚಾರಗಳಂತಹ ಪ್ರಕರಣ ಎಸಗುವಂತೆ ಮಾಡುತ್ತದೆ. ಇದಕ್ಕಾಗಿಯೆ ಇಂದು ಎಲ್ಲಿ ನೋಡಿದರಲ್ಲಿ ಪತ್ರಿಕೆಗಳು ಹುಡುಗಿಯರ ಅತ್ಯಚಾರ ಕುರಿತಂತೆಯೆ ವರದಿಗಳನ್ನು ಮಾಡುತ್ತಿವೆ. ಕೆಲವು ವರದಿಗಳು ಪ್ರಕಟವಾಗುತ್ತೆ ಮತ್ತೆ ಕೆಲವು ಯಾರ ಕಣ್ಣಿಗೂ ಕಾಣದೆ ಭೂತಕಾಲದ ಗೋರಿಯೊಳಗೆ ಮಣ್ಣಾಗುತ್ತವೆ.
ಇಷ್ಟೆಲ್ಲ ವಿಷಯದ ಪ್ರಸ್ತಾಪ ಮಾಡುವುದರ ಉದ್ದೇಶ ನನ್ನ ಅನುಭವಕ್ಕೆ ಬಂದ ಒಂದೆರಡು ಸಂಗತಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನುವುದೇ ಆಗಿದೆ.
ಕಳೆದ ವಾರ ಬೆಂಗಳೂರಿನಿಂದ ಭಟ್ಕಳಕ್ಕೆ ಸ್ಲೀಪರ್ ಬಸ್ಸಿನಲ್ಲಿ ಬರುತ್ತಿರಬೇಕಾದರೆ ಎರಡು ಜೋಡಿ ಹಕ್ಕಿಗಳು ಬಸ್ಸಿನಲ್ಲಿ ಬಂದು ಒರಗಿಕೊಂಡವು. ನೋಡಿದರೆ ಅವು ಸ್ವತಂತ್ರ ಹಕ್ಕಿಗಳು ವೀಕ್ ಎಂಡ್ ಆಚರಿಸಲು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹಾರಿ ಹೋಗುತ್ತಿದ್ದವು. ವಿಷಯ ಇಷ್ಟೆ ಆದರೆ ಸುಮ್ಮನೆ ಇರಬಹುದಿತ್ತು. ಆ ಜೋಡಿ ಹಕ್ಕಿಗಳು ತಮ್ಮದೆ ಮತ್ತೊಂದು ಬಳಗವನ್ನು ಪ್ರೀತಿಯಿಂದ ಫೋನಾಯಿಸಿ ತಮ್ಮೊಂದಿಗೆ ಸೇರಿಕೊಳ್ಳುವಂತೆ ಮಾಡಿದವು. ಇದು ಮಾತ್ರ ಡಿಫ್ರೆಂಟ್ ಸ್ಟೋರಿ.
ಅವನು ತನ್ನ ಗರ್ಲ್ ಫ್ರೆಂಡ್ಗೆ ಹೇಳುತ್ತಾನೆ. ನಮ್ಮೊಂದಿಗೆ ನನ್ನ ಸ್ನೇಹಿತ ಮತ್ತವನ ಗರ್ಲ್ ಫ್ರೆಂಡ್ ಬಂದರೆ ಹೇಗೆ? ಓಹ್ ಆಗಲಿ ಅದಕ್ಕೇನಂತೆ ಈಗಲೆ ಕರೆಸಿಕೊಳ್ಳಿ ಎಂದುತ್ತರಿಸಿದ ಅವಳು ತಾನೆ ಸ್ವತಃ ಅವನ ಸ್ನೇಹಿತನನ್ನು ಆಹ್ವಾನಿಸುತ್ತಾಳೆ. ಅವನು ಬಂದು ಇವರೊಡನೆ ಸೇರಿಕೊಂಡಾಗ ಇವನ ಹುಡುಗಿ ತುಮಕೂರಿನ ಕಾಲೇಜೊಂದರಲ್ಲಿ ಬಿಬಿ‌ಎ ಓದುತ್ತಿದ್ದು ಅಲ್ಲಿ ಯಾವುದೋ ವಸತಿ ನಿಲಯದಲ್ಲಿ ಇದ್ದಾಳೆ. ಇವನು ಅವಳಿಗೆ ಮುಬೈಲ್ ಕರೆ ಮಾಡುತ್ತಾನೆ. ಹುಡುಗಿ ಒಪ್ಪದೆ ಇದ್ದಾಗ ಸ್ನೇಹಿತನ ಗರ್ಲ್ ಫ್ರಂಡ್ ಅವಳೊಂದಿಗೆ ಮಾತನಾಡುತ್ತಾಳೆ. ಅವಳು ನನ್ನಲ್ಲಿ ಬಟ್ಟೆ ಇಲ್ಲ ಎಂದಾಗ ಇಲ್ಲ ಬಾ.. ಮ್ಮ ನನ್ನಲ್ಲಿ ಎರಡು ಜತೆ ಬಟ್ಟೆ ಇವೆ ಅದಕ್ಕೆ ಚಿಂತೆ ಬೇಡ ಫುಲ್ ಎಂಜಾಯ್ ಮಾಡಿ ಬರುವ ಎಂದಾಗ ಆ ಕಡೆಯಿಂದ ಇಲ್ಲ ನಮ್ಮ ಹಾಸ್ಟೆಲ್ ಅಧಿಕಾರಿ ಬಹಳ ಸ್ಟ್ರಿಕ್ಟು ಅವನು ಹಾಗೆ ಹೋಗಲು ಬಿಡಲ್ಲ ಎಂದಾಗ ಮತ್ತೆ ಆ ಕಡೆಯಿಂದ ಒಂದು ಪ್ಲಾನ್ ಬರುತ್ತೆ ನೀನು ಅವರಿಗೆ ಗೌರಿಬಿದನೂರಿನಲ್ಲಿರುವ ನನ್ನ ಅರ್ಜಿ ತೀರಿಕೊಂಡಿದ್ದಾಳೆ ಎಂದು ಹೇಳು ಆಗ ಅವರು ನನ್ನನ್ನು ಬಿಡುತ್ತಾರೆ ಎಂದು ಹೇಳುತ್ತಾಳೆ. ಮತ್ತೆ ಕೆಲವು ಸಮಯ ಮೌನದ ನಂತರ ಈ ಕಡೆಯ ಹುಡುಗಿ ಹಾಸ್ಟೆಲ್ ಅಧಿಕಾರಿಯನ್ನು ಸಂಪರ್ಕಿಸುತ್ತಾಳೆ. ನಾನು ಪುಷ್ಟಾಳ ಅಕ್ಕ ಲಲಿತಾ ಮಾತನಾಡುತ್ತಿರುವುದು. ನನ್ನ ಅರ್ಜಿ ತೀರಿಕೊಂಡಿದ್ದಾರೆ. ನನ್ನ ಯಜಮಾನ ಮತ್ತು ನಾನು ಬೆಂಗಳೂರಿನಿಂದ ಹೊರಟಿದ್ದೇವೆ. ಪುಷ್ಪಾಳನ್ನು ನಾವು ತುಮಕೂರಿನಲ್ಲಿ ಪಿಕ್‌ಆಪ್ ಮಾಡುತ್ತೇವೆ ದಯಮಾಡಿ ಆಕೆಯನ್ನು ಸೆಕ್ಯುರಿಟಿಯವರ ಮೂಲಕ ಕಳುಹಿಸಿಕೊಡಿ ನಾಳೆ ಮನೆಗೆ ಹೋಗಿ ನಮ್ಮ ಪಾಲಕರೊಂದಿಗೆ ನಿಮ್ಮನ್ನು ಮಾತನಾಡಿಸುತ್ತೇವೆ. ಎಂದಾಗ ಕೊನೆಗೆ ಒಪ್ಪಿದ ಆ ಹಾಸ್ಟೆಲ್ ನ ಆಧಿಕಾರಿ ಆ ಹುಡುಗಿಯನ್ನು ಕಳುಹಿಸಿ ಕೊಡುತ್ತಾರೆ. ಇವರು ರಾತ್ರಿಯಿಡಿ ಒಂದೆ ಹಾಸಿಗೆಯಲ್ಲಿ ....... ??? ಮಲಗಿ ಮುರುಡೇಶ್ವರ ತಲುಪುತ್ತಾರೆ. ಮತ್ತೆ ಮರುದಿನ ಆ ಹುಡುಗಿಯನ್ನು ತುಮಕೂರಿನ ಹಾಸ್ಟೆಲ್ ಗೆ ಅದೆ ಬಸ್ಸಿನಲ್ಲಿ ತಲುಪಿಸುತ್ತಾರೆ.
ಈಘಟನೆ ಯಾವುದಾದರೂ ಸಿನಿಮಾದ ದೃಶ್ಯವನ್ನು ನೆನಪಿಸುತ್ತದೆಯಲ್ಲವೇ? ಆದರೆ ಇದು ಸತ್ಯ ಘಟನೆ. ಇಂತಹ ಘಟನೆಗಳು ನಿತ್ಯ ನೂರಾರು ಸಂಖ್ಯೆಯಲ್ಲಿ ಘಟಿಸುತ್ತಲೆ ಇರುತ್ತವೆ ಅದು ನಮ್ಮ ಕಣ್ಣಿಗೆ ಬೀಳುವುದು ಕಡಿಮೆ. ಹಾಗಾಗಿ ನಾವು ಈ ಪ್ರಶ್ನೆಯನ್ನು ಬಹಳ ಗಂಭೀರವಾಗಿಯೆ ತೆಗೆದುಕೊಳ್ಳಬೇಕಾಗಿದೆ. ಕಾಲೇಜು ಓದುತ್ತಿರುವ ನಮ್ಮ ಹುಡ್ಗೀರು ಎಷ್ಟು ಸೇಫ್?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ