ಇಂಜಿನೀಯರಿಂಗ್ ವಿದ್ಯಾರ್ಥಿಯ ಉರಗಪ್ರೇಮ
ಇಂಜಿನೀಯರಿಂಗ್ ವಿದ್ಯಾರ್ಥಿಯ ಉರಗಪ್ರೇಮ
೨೦೦ಕ್ಕೂ ಹೆಚ್ಚು ಹೆಬ್ಬಾವುಗಳ ಸಂರಕ್ಷಕ ಮಿಸ್ಬಾ-ಉಲ್-ಹಖ್
* ಮುಹಮ್ಮದ್ ರಝಾ ಮಾನ್ವಿ
ಹಾವುಗಳೆಂದರೆ ಎಲ್ಲರಿಗೂ ಭಯ.ಅದರಲ್ಲೂ ಹೆಬ್ಬಾವು ಕಂಡರೆ ಹೆದರಿಕೆ ಹುಟ್ಟಿಕೊಳ್ಳುತ್ತದೆ. ಇಂತಹದ್ದರಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಸರ್ಪ ಹಾಗೂ ಹೆಬ್ಬಾವುಗಳನ್ನು ಹಿಡಿದು ಅವುಗಳನ್ನು ಸಂರಕ್ಷಿಸಿದ ಕೀರ್ತಿ ಭಟ್ಕಳದ ಅಂಜುಮನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಸಿವಿಲ್ ಇಂಜಿನೀಯರ್ ವಿಭಾಗದ ೨೨ವರ್ಷದ ವಿದ್ಯಾರ್ಥಿ ಮಿಸ್ಬಾ-ಉಲ್-ಹಖ್ ಗೆ ಸಲ್ಲುತ್ತದೆ.

ಈತ ತನ್ನ ೧೧ನೇ ವರ್ಷದ ವಯೋಮಾನದಲ್ಲೆ ಹಾವುಗಳನ್ನು ಹಿಡಿಯು ಕಲೆಯನ್ನು ರೂಢಿಸಿಕೊಂಡಿರುವುದಾಗಿ ಹೇಳುತ್ತಾನೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ನೌನಿಹಾಲ್ ಶಾಲೆಗಳಲ್ಲಿ ಪಡೆದ ಈತ ಓದಿನಲ್ಲೂ ಮುಂಚೂಣಿಯ ವಿದ್ಯಾರ್ಥಿ, ಈಗ ಸಿವಿಲ್ ಇಂಜಿನೀಯರಿಂಗ್ ಓದುತ್ತಿರುವ ಈತ ಭಟ್ಕಳದ ಯಾವ ಮೂಲೆಯಲ್ಲೂ ಹಾವು ಕಂಡರೆ ಸಾಕು ಅದನ್ನು ಸುರಕ್ಷತವಾಗಿ ಹಿಡಿದು ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸುತ್ತಾನೆ. ಹಾವುಗಳನ್ನು ಕಂಡರೆ ಹಿಡಿ, ಕೊಲ್ಲು ಎನ್ನುವ ಜನರ ಮಧ್ಯೆ ಇಂತಹ ಉರಗಪ್ರೇಮಿಯೊಬ್ಬ ತನ್ನ ಮಾನವೀಯ ಸ್ಪರ್ಷದೊಂದಿಗೆ ಅವುಗಳಿಗೆ ಮರುಜೀವ ನೀಡುತ್ತಾನೆ.
ಉತ್ತರಕನ್ನಡ ಜಿಲ್ಲೆಯು ಶೇ೮೦ರಷ್ಟು ಅರಣ್ಯ ಪ್ರದೇಶ ಹೊಂದಿದ್ದು ಅದರಲ್ಲಿ ಭಟ್ಕಳದಲ್ಲಿಯೂ ಪಟ್ಟಣಕ್ಕೆ ಹೊಂದಿಕೊಂಡಂತೆ ಅಣತಿ ದೂರದಲ್ಲಿ ಅರಣ್ಯಪ್ರದೇಶವಿದೆ. ಎಷ್ಟೋ ಜನರು ಮದ್ಯೆದಲ್ಲೆ ಮನೆಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಭಟ್ಕಳದ ಕಾರಗದ್ದೆ, ಸಾಗರ ರಸ್ತೆ, ಆಝಾದ್ ನಗರ್ ಪ್ರದೇಶದಲ್ಲಿ ಏನಿಲ್ಲ ಅಂದರೂ ತಿಂಗಳಿಗೆ ಒಂದೆರಡು ಹೆಬ್ಬಾವುಗಳು ತಮ್ಮ ಆಹಾರವನ್ನು ಹುಡುಕಿಕೊಂಡು ಪಟ್ಟಣದ ಕಡೆ ಮುಖ ಮಾಡುತ್ತವೆ. ಇದನ್ನು ಕಂಡು ಹೆದರುವ ಜನ ಅವುಗಳನ್ನು ಬಡಿ,ಕೊಲ್ಲು ಎಂದು ಹೇಳುವಷ್ಟರಲ್ಲೆ ಮಿಸ್ಬಾ-ಉಲ್ ಹಖ್ ಪ್ರತ್ಯಕ್ಷನಾಗಿ ತನ್ನ ಪ್ರೀತಿಯ ಸ್ಪರ್ಷದಿಂದ ಅವುಗಳನ್ನು ಹಿಡಿದು ಅದಕ್ಕೊಂದು ಸುರಕ್ಷತೆಯ ತಾಣವನ್ನು ನೀಡುತ್ತಾನೆ. ಅರಣ್ಯ ಸಂರಕ್ಷಕರು ಅದನ್ನು ಮತ್ತೆ ಕಾಡಿಗೆ ಬಿಟ್ಟು ಬರುತ್ತಾರೆ. ಹೀಗೆ ಹಾವುಗಳನ್ನು ಹಿಡಿಯಲು ತನಗೆ ಯಾರು ಪ್ರೇರಣೆ ಎನ್ನುವ ಪ್ರಶ್ನೆಗೆ ತನ್ನ ತಂದೆಯೆ ನನಗೆ ಪ್ರೇರಣೆ ಎನ್ನುತ್ತಾರೆ ಮಿಸ್ಬಾ.
ತಾನು ಮೊದಲ ಬಾರಿ ಹಾವು ಕಂಡಿದ್ದು ಒಂದು ಮೃಗಾಲಯದಲ್ಲಿ ಅದನ್ನು ಕಂಡು ರೊಮಾಂಚಿತಗೊಂಡಿದ್ದು ನಂತರದ ದಿನಗಳಲ್ಲಿ ಜಿಯೋಗ್ರಾಫಿ ಚಾನೆಲ್ ನಲ್ಲಿ ಹಾವುಗಳ ಕುರಿತಾಗಿ ಬಂದ ಸಾಕ್ಷ್ಯ ಚಿತ್ರದಿಂದ ಹಾವುಗಳನ್ನು ಹೇಗೆ ಹಿಡಿಯಬೇಕು ಎನ್ನುವುದನ್ನು ಕಲಿತುಕೊಂಡೆ ಎನ್ನುತ್ತಾರೆ.
ತಮ್ಮ ಮೊದಲ ಹಾವಿನ ಅನುಭವವನ್ನು ಹಂಚಿಕೊಳ್ಳುವ ಮಿಸ್ಬಾ, ಒಂದು ದಿನ ತಾನು ತನ್ನ ತಂದೆಯ ಭೇಟಿಗಾಗಿ ವಲ್ಕಿ ಗ್ರಾಮಕ್ಕೆ ಹೋಗುತ್ತಿರುವಾಗ ನದಿಯ ದಡದಲ್ಲಿ ಒಂದು ಹಾವು ಕಂಡಿದ್ದು ಅದನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದು ನಂತರ ನನಗೆ ನನ್ನ ತಪ್ಪಿನ ಅರಿವಾಯಿತು. ನನ್ನ ಸಂತೋಷಕ್ಕಾಗಿ ಒಂದು ನಿರುಪದ್ರವಿ ಜೀವಿಯನ್ನು ಕೊಂದು ಬಿಟ್ಟೆನಲ್ಲ ಎನ್ನುವ ವ್ಯಥೆ. ಈ ಘಟನೆಯೆ ನಂತರ ನನಗೆ ಹಾವುಗಳನ್ನು ಬದುಕಿಸಬೇಕು ಎನ್ನುವ ಗೀಳು ಹುಟ್ಟುವಂತೆ ಮಾಡಿದ್ದು. ಇದುವರೆಗೆ ತಾನು ಕೆಂಪುಹಾವು, ನಾಗರ ಹಾವು, ಹೆಬ್ಬಾವುಗಳು ಸೇರಿದಂತೆ ಸುಮಾರು ೨೦೦ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿದ್ದಾಗಿ ವಾರ್ತಾಭಾರತಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಳೆದ ಮೂರು ವರ್ಷಗಳಿಂದ ಅರಣ್ಯ ಸಂರಕ್ಷಣಾ ಇಲಾಖೆಯವರು ನನ್ನ ಸಂಪರ್ಕದಲ್ಲಿದ್ದು ಆಗಾಗ ಇಂತಹ ಹಾವುಗಳು ಕಂಡಬಂದಲ್ಲಿ ನನ್ನನ್ನು ಕರೆಯುತ್ತಾರೆ ಮತ್ತು ನಾನವರಿಗೆ ಸಂಪೂರ್ಣ ಸಹಕಾರ ನೀಡಿ ಹಾವುಗಳನ್ನು ಹಿಡಿಯುತ್ತೇನೆ. ಅವರು ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಾರೆ. ಇಲ್ಲಿನ ಅರಣ್ಯ ಇಲಾಖೆಯಲ್ಲಿ ಹಾವುಗಳನ್ನು ಹಿಡಿಯಲಿಕ್ಕೆಂದೆ ಓರ್ವ ಸಿಬಂಧಿ ಇದ್ದಾರೆ. ಆದರೆ ಅವರು ವಿಷರಹಿತ ಹಾವು ಮಾತ್ರ ಹಿಡಿಯುತ್ತಾರೆ. ವಿಷದ ಹಾವುಗಳಿಗೆ ನನ್ನನ್ನೆ ಕರೆಯುತ್ತಾರೆ ಎನ್ನುವ ಮಿಸ್ಬಾ ಇದಕ್ಕಾಗಿ ತಾನು ಇಲಾಖೆಯಿಂದ ಯಾವುದೆ ಪ್ರತಿಫಲ ಪಡೆಯುವುದಿಲ್ಲ ಎನ್ನುತ್ತಾರೆ. ಇದು ನನ್ನ ಹವ್ಯಾಸವಾಗಿದ್ದು ಎಲ್ಲಿಯೂ ಹಾವು ಕಂಡುಬಂದರೆ ಅದನ್ನು ಹಿಡಿಯುವ ತನಕ ನಾನು ಮನೆ ಸೇರುವುದಿಲ್ಲ, ಕೆಲವು ಸಂದರ್ಭದಲ್ಲಿ ಹಾವು ಕಚ್ಚಿದ್ದು ಇದೆ ಇದಕ್ಕಾಗಿ ನಾನು ಪ್ರಥಮ ಚಿಕಿತ್ಸೆಯನ್ನು ಪಡೆದುಕೊಳ್ಳುವ ರೀತಿಯನ್ನು ತಿಳಿದುಕೊಂಡಿದ್ದೇನೆ ಎನ್ನುತ್ತಾರೆ.
ಜನರಿಗೆ ಏನಾದರೂ ಉಪಕಾರ ಮಾಡಬೇಕು ಎನ್ನುವ ಉದ್ದೇಶದಿಂದಾಗಿಯೆ ತಾನು ಈ ಕಾರ್ಯಕ್ಕಿಳಿದಿದ್ದು ಇದರಿಂದ ತನಗೆ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲ ಎಂದು ಹೇಳುವ ಅವರು ನನ್ನ ಇಂಜಿನೀಯರಿಂಗ್ ಪದವಿಯ ನಂತರ ನನ್ನ ಆಸಕ್ತಿಯ ವಿಷಯವಾದ ‘ವೆಟರನರಿ ಸೈನ್ಸ್’ ನಲ್ಲಿ ಡಿಪ್ಲೋಮಾ ಅಥವಾ ಪದವಿಯನ್ನು ಪಡಯುವ ಬಯಕೆಯಿದ್ದು ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ. ಸದ್ಯಕ್ಕೆ ನಾನು ನನ್ನ ಪದವಿ ಹಾಗೂ ಕುಟುಂಬದ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದು ಪದವಿಯನ್ನು ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣನಾಗುವ ಗುರಿಯನ್ನು ಹೊಂದಿರುವುದಾಗಿ ತಿಳಿಸುತ್ತಾರೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ