‘ಮಹಿಳೆಯರ ಶೋಷಣೆ ಮುಕ್ತ ಬದುಕು ರೂಪಿಸಲು ಇದು ಸೂಕ್ತ ಸಮಯ’



ಮಾ.೮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ



ಎಂ.ಆರ್.ಮಾನ್ವಿ.
೨೦೧೩ನೇ ಮಾರ್ಚ ೮ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಲ್ಲೇನು ವಿಶೇಷ, ಪ್ರತಿವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನವುದು ನಿಮ್ಮ ಪ್ರಶ್ನೆಯಾಗಿದ್ದರೆ ಖಂಡಿತವಾಗಿಯೂ ನಿಮ್ಮ ಪ್ರಶ್ನೆ ಸಹಜವಾದುದೇ. ಆದರೆ ಬಾರಿಯ ದಿನಾಚರಣೆಗೊಂದು ಮಹತ್ವ ಇರುವುದು ಅದರ ಘೋಷವಾಖ್ಯದಲ್ಲಿ.A promise is a promise: time  for action to end violence against women’ “ಮಹಿಳೆಯ ಶೋಷಣೆ ಕೊನೆಗಾಣಿಸಲು ಇದು ಸೂಕ್ತ ಸಮಯ; ಇದೊಂದು ಪ್ರತಿಜ್ಞೆ” ಎನ್ನುವ ಸಂಕಲ್ಪದೊಂದಿಗೆ ೨೦೧೩ನೇ ವರ್ಷವನ್ನು ಆಚರಿಸುತ್ತಿರುವುದೇ ಇದಕ್ಕೆ ಕಾರಣ.
 
ಇತ್ತಿಚೆಗೆ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ದೌರ್ಜನ್ಯದ ಹಿನ್ನೆಲೆಯಲ್ಲಿ ಇಂತಹದ್ದೊಂದು ಘೋಷವ್ಯಾಖ್ಯ ಬಹಳ ಮಹತ್ವ ಪಡೆದುಕೊಂಡಿದೆ. ನಿಜಕ್ಕೂ ಮಹಿಳೆಯರ ಮೇಲಿನ  ಶೋಷಣೆಯನ್ನು ಕೊನೆಗಾಣಿಸಲು ಇದು ಸೂಕ್ತ ಸಮಯ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ನಡೆದ ಮಹಿಳಾ ದೌರ್ಜನ್ಯಗಳು, ಶೋಷಣೆಗಳು ಲೆಕ್ಕ ಹಾಕಿದರೆ ಬರೆಯಲು ಪುಟಗಳು ಸಾಲವು. 
 
ನಮ್ಮ ಕಾನೂನು ಮಹಿಳೆಯರಿಗೆ ಯಾವ ರೀತಿಯ ರಕ್ಷಣೆಯ ಭರವಸೆಯನ್ನು ನೀಡಿದೆಯೂ ಅದಕ್ಕಿಂತ ಹತ್ತುಪಟ್ಟು ಮಹಿಳಾ ಶೋಷಣೆಯ ಘಟನೆಗಳು ನಮ್ಮ ದೇಶದಲ್ಲಿ ಜರಗುತ್ತಿರುವುದು ವಿಪರ್ಯಾಸದ ಸಂಗತಿ. ಅಂದ ಹಾಗೆ ಮಹಿಳೆಯ ಶೋಷಣೆ ಅಥವಾ ದೌರ್ಜನ್ಯ ಪ್ರಕರಣಗಳು ಇಂದು ನಿನ್ನೆಯದಲ್ಲ. ಮಹಿಳೆ ಅನಾದಿಕಾಲದಿಂದಲೂ ಶೋಷಣೆಗೊಳಗಾಗುತ್ತಲೆ ಬಂದಿದ್ದಾಳೆ. ಮಾಹಿತಿ ತಂತ್ರಜ್ಞಾನದಲ್ಲುಂಟಾದ ಅಗಾಧ ಬೆಳವಣಿಗೆಯ ಪರಿಣಾಮ ಒಂದೊಂದಾಗಿ ಮಹಿಳಾ ದೌರ್ಜನ್ಯ ಹಾಗೂ ಶೋಷಣೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
 
ನಮ್ಮಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಮಹಿಳೆ ಶೋಷಣೆಗೆ ಒಳಗಾಗುತ್ತಲೆ ಬಂದಿದ್ದಾಳೆ. ತನ್ನ ಸ್ವಂತ ಕುಟುಂಬಿಕ ರಿಂದ ಹಿಡಿದು ತಾನು  ಕಾರ್ಯನಿರ್ವಹಿಸುತ್ತಿರುವ ಕಚೇರಿ ಸಿಬಂಧಿಗಳವರೆಗೆ ಶೋಷಣೆಯಾಗುತ್ತಲೆ ಬಂದಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಅಬಲೆಯಾಗಿದ್ದು ಸಬಲ ಹಾಗೂ ಸಶಕ್ತಗೊಳ್ಳಲು ಹೆಣಗಾಡಿ ಕೊನೆಗೆ ವ್ಯವಸ್ಥೆಯಿಂದಲೆ ಶೋಷಿಸಲ್ಪಟ್ಟು ನಿರ್ಗತಿಕಳಾಗಿ ಬದುಕಬೇಕಾದ ಸನ್ನಿವೇಶವನ್ನು ಈ ಸಮಾಜವೆ ನಿರ್ಮಾಣ ಮಾಡಿದೆ. ದೇಶದ ಪ್ರತಿ ೫ಮಹಿಳೆಯರಲ್ಲಿ ಓರ್ವ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ ಎನ್ನುವ ಅಂಶವನ್ನು ಇತಿಚೆಗಿನ ಮಾಧ್ಯಮ ವರದಿಗಳು ಹೇಳುತ್ತಿವೆ. 
 
ದುರಾದೃಷ್ಟವೆಂದರೆ ನಮ್ಮಲ್ಲಿ ಮಹಿಳೆಯರಿಂದಲೆ ಮಹಿಳೆಯರು ಶೋಷಣೆಗೊಳಪಡುತ್ತಿದ್ದಾರೆ ಎನ್ನುವುದು. ಒಮ್ಮೆ ಟಿ.ವಿ ಮಾಧ್ಯಮವೊಂದರಲ್ಲಿ ಉತ್ತರಪ್ರದೇಶದ ನೈಜ ಘಟನೆಯಾಧರಿತ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಸ್ಥೆಯೋರ್ವಳು ಯಾವ ರೀತಿ ತನ್ನ ಮಹಿಳಾ ಸಿಬಂಧಿಗಳಿಗೆ ಕಿರುಕುಳ ಕೊಡುತ್ತಿದ್ದಳು, ತನ್ನ ‘ಬಾಸ್’ ಗಳನ್ನು ತೃಪ್ತಿಪಡಿಸಲು ಇತರ ಮಹಿಳಾ ಶಿಕ್ಷಕಿಯರನ್ನು ಲೈಂಗಿಕವಾಗಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಳು ಎನ್ನುವುದನ್ನು ತೋರಿಸಿದೆ.
 
ಇದು ಬಿಡಿ ನಾವು ವಾಸಿಸುವಂತಹ ಸಮಾಜದಲ್ಲಿ ಮಹಿಳೆಯರು ಮಹಿಳೆಯರನ್ನು ಶೋಷಿಸುವಂತಹ ಘಟನೆಗಳು ಜರಗುವುದಿಲ್ಲ? ಕೆಲವು ಕಣ್ಣಿಗೆ ಕಂಡರೂ ನಾವು ಅದನ್ನು ನೋಡಿ ಕಣ್ಣುಮುಚ್ಚಿ ಕುಳಿತಿರುವುದೆಂದರೆ ನಮ್ಮಲ್ಲಿ ಇನ್ನು ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿಲ್ಲ ಎಂದೆ ಅರ್ಥವಲ್ಲವೆ? ಮಹಿಳೆಯ ಮೈ ಮಾರುವ ಮಾರಾಟ ಜಾಲದಲ್ಲಿ ಯಾರು ಮುಂದಿದ್ದಾರೆ? ಮಹಿಳೆಯರ ಸಹಕಾರ ಇಲ್ಲದೆ ಇದು ನಡೆಯಲು ಸಾಧ್ಯವೇ? ಮುಂಬೈಯಂತಹ ಮಹಾನಗರಗಳಲ್ಲಿ ಇರುವ ಎಷ್ಟೋ ಇಂತಹ ಅಡ್ಡೆಗಳನ್ನು ನಡೆಸುವವರು ಮಹಿಳೆಯರೆ ಎನ್ನುವುದನ್ನು ವಿವರಿಸಿ ಹೇಳಬೇಕಾಗಿಲ್ಲ.  ಮಹಿಳಾ ಶೋಷಣೆ ದೌರ್ಜನ್ಯಗಳ ವಿರುದ್ಧ ಈಗ ಎದ್ದಿರುವ ದೇಶ ಹಾಗೂ ರಾಷ್ಟ್ರ ವ್ಯಾಪಿ ಕೂಗು ಒಳ್ಳೆಯ ಬೆಳವಣೆಗೆಯಾಗಿದ್ದು ಮಹಿಳೆಯರು ಈ ಹೋರಾಟದಲ್ಲಿ ಮುಂದೆ ಬರಬೇಕಾಗಿದೆ. 
 
ಸರ್ಕಾರಿ ಹಾಗೂ ಅರೆ ಸರ್ಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಉದ್ಯೋಗದಲ್ಲಿನ ಅವಕಾಶಗಳು ಹೆಚ್ಚಾಗಿದ್ದು ಇದೇ ಸಮಯದಲ್ಲಿ ಶೋಷಣೆಯ ರೇಖೆಯು ಕೂಡ ಮೇಲಕ್ಕೇರುತ್ತ ಹೋಗುತ್ತದೆ. ಪುರುಷನ ಭುಜಕ್ಕೆ ಭುಜ ತಾಗಿಸಿ ಪ್ರತಿಯೊಂದು ಮೈದಾನದಲ್ಲಿ ಮಹಿಳೆಯರು ಮನ್ನುಗ್ಗುತಿರುವದು ಕೆಲವು ಪುರಷಮಣಿಗಳ ಅಸಹಕಾರಕ್ಕೆ ಕಾರಣವಾಗಿದೆ. 
 
ಹತ್ತರಲ್ಲಿ ಹನ್ನೊಂದಾಗಬಾರದು: ನಮ್ಮಲ್ಲಿ ಆಚರಿಸಲ್ಪಡುವ ಎಲ್ಲ ದಿನಾಚರಣೆಯಂತೆ ಮಹಿಳಾ ದಿನಾಚರಣೆಯು ಹತ್ತರಲ್ಲಿ ಹನ್ನೊಂದರಂತೆ ಆಗಬಾರದು. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಂತೋ ಇದು ಅರ್ಥಗರ್ಭಿತವಾಗಿ ಆಚರಿಸಲ್ಪಡಬೇಕು. ಕೇವಲ ಸಭೆ ಸಮಾರಂಭಗಳಿಗೆ, ಸಿಹಿ ಕೊಡತೆಗೆದುಕೊಳ್ಳವುದಕ್ಕೆ ಸೀಮಿತಗೊಳ್ಲದೆ, ಮಹಿಳೆಯರು ತಮ್ಮ ಹಕ್ಕು ಮತ್ತು ಕರ್ತವ್ಯ ಕುರಿತಂತೆ ಅರಿಯುವಂತಾಗಬೇಕು. 
 
ಇಂದು ಮಹಿಳೆ ಜಾಹಿರಾತುಗಳ ಸರಕಾಗುತ್ತಿದ್ದು ಪ್ರತಿಯೊಂದು ವಸ್ತುವನ್ನು ಮಾರಾಟ ಮಾಡಬೇಕಾದರೂ ಅವರಿಗೆ ಹೆಣ್ಣಿನ ನಗ್ನಸೌಂದರ್ಯ ಬೇಕು. ಸೂಜಿಯಿಂದ ಹಿಡಿದು ಪ್ರತಿಯೊಂದು ವಸ್ತುವಿನ ಮಾರುಕಟ್ಟೆ ಕುದುರಿಸಲು ಹೆಣ್ಣನ್ನು ಯಥೇಚ್ಚವಾಗಿ ಬಳಸಿಕೊಳ್ಳುತ್ತಿರುವುದು ಹೆಣ್ಣು ಬಳಕೆಯಾಗುವುದರಿಂದಾಗಿ ತಾನೆ. ಒಂದು ವೇಳೆ ಹೆಣ್ಣೆ ಇದಕ್ಕೆ ವಿರೋಧಿಸಿದರೆ? ಶೋಷಣೆಯಾಗುವುದು ತಪ್ಪುತ್ತದೆ ಮತ್ತು ಶೋಷಿಸಲ್ಪಡುವವರು ಇಲ್ಲವಾಗುತ್ತಾರೆ. 
 
ಅತ್ಯಾಚಾರ ಕೆಲವು ಅಂಕಿ‌ಅಂಶಗಳು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ-ಅಂಶದ ಪ್ರಕಾರ ಅತ್ಯಾಚಾರ ಎಂಬುದು ಎಲ್ಲಕ್ಕಿಂತಲೂ ದೊಡ್ಡ ಅಪರಾಧ. ೨೦೧೦ರಲ್ಲಿ ದೇಶದಲ್ಲಿ ೨೨,೧೭೨ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ ೨೦೧೧ರಲ್ಲಿ ೨೪,೫೦೬ ಪ್ರಕರಣಗಳು ದಾಖಲಾಗಿವೆ. ೨೦೦೮ರಿಂದ ೨೦೧೧ರವರೆಗೆ ಶೇ ೨೨ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ
 
ಶೇ ೧೦ರಷ್ಟು ಅತ್ಯಾಚಾರ ಪ್ರಕರಣಗಳು ೧೪ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ, ಶೇ ೧೬ರಷ್ಟು ಪ್ರಕರಣಗಳು ೧೬ರಿಂದ ೧೮ ವಯಸ್ಸಿನ ಬಾಲಕಿಯರ ಮೇಲೆ ಮತ್ತು ಶೇ ೫೭ರಷ್ಟು ಪ್ರಕರಣಗಳು ೧೮ರಿಂದ ೩೦ ವಯಸ್ಸಿನವರ ಮೇಲೆ ನಡೆದಿರುತ್ತದೆ. ಇದು ಅತ್ಯಾಚಾರಿಗಳ ಮಾನಸಿಕ ಕುಸಿತದ ಕಡೆಗೆ ಗಮನ ಸೆಳೆಯುತ್ತದೆ.
 
ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಂಡು ನ್ಯಾಯ ನೀಡುವ ನಿಟ್ಟಿನಲ್ಲಿ ಸಮುದಾಯ ಮತ್ತು ಅಧಿಕಾರ ಶಾಹಿ ನಿರ್ಲಕ್ಷ್ಯ ವಹಿಸುತ್ತದೆ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ರಾಜಕೀಯಗೊಳಿಸಲಾಗುತ್ತದೆ. ದೂರುಗಳನ್ನು ಸ್ವೀಕರಿಸಲು, ಕ್ರಮ ಕೈಗೊಳ್ಳಲು ಪೊಲೀಸರು ನಿರಾಕರಿಸುತ್ತಾರೆ. ಎಫ್‌ಐ‌ಆರ್ ದಾಖಲಾದ ಬಳಿಕವೂ ಕ್ರಮ ಕೈಗೊಳ್ಳುವುದಿಲ್ಲ ಎನ್ನವು ದೂರಗಳು ಈ ಸಂದರ್ಭದಲ್ಲಿ ಕೇಳಿಬರುತ್ತಿವೆ. 
 
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ: ಇದು ಯಾವುದೇ ಹಬ್ಬವಲ್ಲ, ಮಹಿಳೆ ತನ್ನ ಹಕ್ಕನ್ನು ಪಡೆಯಲು ಹೋರಾಟಗೈದ ಯಶೋಗಾಥೆ. ಉತ್ತರ ಅಮೇರಿಕಾದ ‘ಲೇಬರ್ ಮೂಮೆಂಟ್ಸ್ ಚಳುವಳಿಯ ಮೂಲಕ. ಮೊತ್ತಮೊದಲ ‘ಅಂತರಾಷ್ಟ್ರೀಯ ಮಹಿಳಾ ದಿನ’ ಆಚರಣೆಯಾಗಿದ್ದು ೧೯೦೯ ಫೆ.೨೮ರಂದು. ಅಮೇರಿಕಾದ ಸಮಾಜವಾದಿ ಪಕ್ಷ ಈ ದಿನವನ್ನು ಸರ್ಕಾರಿ ಕಾರ್ಮಿಕ ಚಳುವಳಿಯಲ್ಲಿ ಭಾಗವಹಿಸಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಿತು. ಹಾಗಾಗಿ ಇದೊಂದು ಹೋರಾಟ, ಸಂಘರ್ಷದ ಯಶೋಗಾಥೆ ಎಂದೆ ಕರೆಯಬಹುದು. 
 
೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಿದವು. ನಂತರ ೧೯೭೭ ರಲ್ಲಿ "ದಿ ಜನರಲ್ ಅಸ್ಸೆಂಬ್ಲಿ" ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ ೮ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ