ಭಟ್ಕಳ ಸಂಕ್ಷಿಪ್ತ ಸುದ್ದಿಗಳು


ವೈಭವದಿಂದ ಜರುಗಿದ ಶಿರಾಲಿ ರಥೋತ್ಸವ

ಭಟ್ಕಳ: ೩೧,ಶಿರಾಲಿಯ ಚಿತ್ರಾಪುರ ಮಠದ ಶ್ರೀ ಭವಾನಿಶಂಕರ ದೇವರ ೧೪೯ನೇ ರಥೋತ್ಸವ ನಿನ್ನೆ ಸಂಜೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನೆರವೇರಿತು.
ಶ್ರೀ ಮಠದಲ್ಲಿ ರಾಮನವಮಿಯ ದಿನದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ನಿನ್ನೆ ಸಂಜೆ ಐದು ಗಂಟೆಗೆ ಸರಿಯಾಗಿ ರಥವನ್ನು ಎಳೆಯಲಾಯಿತು. ರಥದಲ್ಲಿ ಅರ್ಚಕರೊಂದಿಗೆ ಸ್ವಾಮೀಜಿಯವರೂ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ರಥಕಾಣಿಕೆ, ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿದರು. ರಥೋತ್ಸವದ ನಂತರದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಧರ್ಮ ಸಭಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ಎಣ್ಣೆಮಡಿ, ವ್ಯವಸ್ಥಾಪಕ ಭವಾನಿಶಂಖರ ಕೈಲಾಜೆ, ಟ್ರಸ್ಟಿಗಳಾದ ಪ್ರಕಾಶ ಗೋಕರ್ಣ ಮುಂತಾದವರು ಉಪಸ್ಥಿತರಿದ್ದರು. ಚಿತ್ರಾಪುರ ಲೋಕಲ್ ಸಭಾದ ಅಧ್ಯಕ್ಷ ಎಸ್ ಜಿ ಕೊಪ್ಪಿಕರ ಸ್ವಾಗತಿಸಿ, ವಂದಿಸಿದರು. ಇಂದು ಬೆಳಿಗ್ಗೆ ದೇವರ ಮೃಗಭೇಟೆ ಉತ್ಸವವೂ ಸಹ ಅದ್ದೂರಿಯಾಗಿ ನಡೆಯಿತು. ಎ.೧ ರಂದು ಅವಬೃತ ಸ್ನಾನ(ಒಕ್ಕುಳಿ), ಧ್ವಜಾರೋಹಣ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ನಿನ್ನೆ ಸಂಜೆ ನಡೆದ ರಥೋತ್ಸವದ ಸಂದರ್ಭದಲ್ಲಿ ಸಿಪಿ‌ಐ ಗುರು ಮಾಥೂರು ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು

ಭಟ್ಕಳ ಪುರಸಭೆ ಬಜೆಟ್ ಮಂಡನೆ

ಭಟ್ಕಳ:೩೧ ಭಟ್ಕಳ ಪುರಸಭೆಯ ೨೦೧೦-೧೧ ನೇ ಸಾಲಿನ ೧೨,೬೯,೨೭೦೦೦ ರೂ ಮೊತ್ತದ ಆಯ ವ್ಯಯವನ್ನು ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಪರ್ವೇಜ್ ಕಾಶೀಂ ಜಿ ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆದರು.
ಪುರಸಭೆಯ ೧೨,೬೯,೨೭೦೦೦ ರೂ ಆದಾಯದಲ್ಲಿ ೧೨,೪೮,೬೫೦೦೦ ರೂ ಖರ್ಚುನ್ನು ತೋರಿಸಿದ್ದು, ಒಟ್ಟೂ ೨೦.೬೨ ಲಕ್ಷ ರೂಪಾಯಿ ಉಳಿತಾಯದ ಆಯವ್ಯಯವನ್ನು ಮಂಡಿಸಲಾಗಿದೆ. ತೆರಿಗೆಯಿಂದ ೫೫ ಲಕ್ಷ, ಪುರಸಭೆಯ ಕಟ್ಟಡಗಳ ಬಾಡಿಗೆಯಿಂದ ೧೬.೭೦ ಲಕ್ಷ, ನೀರಿನ ಕರದಿಂದ ೧೫.೫೦ ಲಕ್ಷ, ಒಳಚರಂಡಿ ಕರದಿಂದ ೪ ಲಕ್ಷ, ವ್ಯಾಪಾರ ಪರವಾನಿಗೆಯಿಂದ ೧.೭೫ ಲಕ್ಷ, ಟೆಂಡರ್ ಪಾರ್ಮ ಸೇಲ್‌ನಿಂದ ೬ ಲಕ್ಷ, ಕಟ್ಟಡ ಪರವಾನಿಗೆಯಿಂದ ೧ ಲಕ್ಷ, ರಸ್ತೆ ಕಟ್ಟಿಂಗ್ ಚಾರ್ಜಸ್‌ನಿಂದ ೩ ಲಕ್ಷ, ಒಳಚರಂಡಿ ಕನೆಕ್ಸನ್‌ನಿಂದ ೧೨ ಲಕ್ಷ, ಕುಡಿಯುವ ನೀರಿನ ಕನೆಕ್ಸನಿಂದ ೧.೫೦ ಲಕ್ಷ, ಹಳೇ ಸಾಮಗ್ರಿ ಮಾರಾಟದಿಂದ ೫೦ ಸಾವಿರ, ಗುತ್ತಿಗೆ ರಜಿಸ್ಟ್ರೇಶನ್‌ಬಿಂದ ೨೫ ಸಾವಿರ, ಬ್ಯಾಂಕ್ ಬಡ್ಡಿ ೧ ಲಕ್ಷ, ಮೈದಾನ ಬಾಡಿಗೆಯಿಂದ ೪೦ ಸಾವಿರ ಸೇರಿದಂತೆ ಇನ್ನಿತರ ಮೂಲದಿಂದ ೯.೭ ಲಕ್ಷರೂ ಆದಾಯವನ್ನು ತೋರಿಸಲಾಗಿದೆ. ಅದರಂತೆ ಪುರಸಭೆಗೆ ಎಸ್ ಎಪ್ ಸಿ ಯೋಜನೆಯಡಿಯಲ್ಲಿ ೨೫೦ ಲಕ್ಷ, ಎಲೆಕ್ಟ್ರಿಸಿಟಿ ಗ್ರ್ಯಾಂಟ ೮೪ ಲಕ್ಷ, ಸೇಲರಿ ಗ್ರ್ಯಾಂಟ ೧೦೧ ಲಕ್ಷ ಹಾಗೂ ಮುಖ್ಯಮಂತ್ರಿ ಪಟ್ಟಣ ಅಭಿವೃದ್ದಿ ಯೋಜನೆಯಡಿಯಲ್ಲಿ ೫೦೦ ಲಕ್ಷ ರೂ ಅನುದಾನ ಬಂದಿರುವ ಕುರಿತು ತೋರಿಸಲಾಗಿದೆ. ಖರ್ಚಿನ ಬಾಬ್ತಿನಲ್ಲಿ ಕಚೇರಿಗೆ ನಿರ್ವಹಣೆಗೆ ೭ ಲಕ್ಷ, ಕಟ್ಟಡ ರಿಪೇರಿ ಹಾಗೂ ನೂತನ ಕಟ್ಟಡಕ್ಕೆ ೧೨೨.೫೦ ಲಕ್ಷ ತೆಗೆದಿಸಲಾಗಿದೆ. ಅದರಂತೆ ಹೊಸ ರಸ್ತೆ ನಿರ್ಮಾಣಕ್ಕೆ ೩೦೦ ಲಕ್ಷ, ಹಳೇ ರಸ್ತೆ ರಿಪೇರಿಗೆ ೧೫ ಲಕ್ಷ, ನೀರು ಸರಬರಾಜಿಗೆ ೩೩ ಲಕ್ಷ, ಒಳಚರಂಡಿ ನಿರ್ವಹಣೆಗೆ ೩೦ ಲಕ್ಷ, ಗಾರ್ಡನ್ ರಿಪೇರಿಗೆ ೪ ಲಕ್ಷ, ಬೀದಿ ದೀಪದ ನಿರ್ವಹಣೆ ಹಾಗೂ ಖರೀದಿಗೆ ೩೫ ಲಕ್ಷ, ತ್ಯಾಜ್ಯ ವಸ್ತು ನಿರ್ವಹಣೆಗೆ ೬೨ ಲಕ್ಷ, ವಾಹನ ನಿರ್ವಹಣೆಗೆ ೧೯ ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ದಿಗೆ ೫೪.೮೩ ಲಕ್ಷ, ವಿದ್ಯುತ್ ಬಿಲ್ ೮೬ ಲಕ್ಷ ರೂ ಖರ್ಚು ತೋರಿಸಲಾಗಿದೆ.

ಅಪರಾಧ ಸುದ್ಧಿ

ಭಟ್ಕಳ:೩೧ ವರದಕ್ಷಿಣೆ ಕಿರುಕುಳ ನೀಡಿ ಜೀವಬೆದರಿಕೆ ಹಾಕಿದ ಪತಿಯ ವಿರುದ್ದ ಮಹಿಳೆಯೋರ್ವಳು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಜಾಲಿಕೋಡಿಯ ಶಶಿಕಲಾ ಜೈರಾಮ ನಾಯ್ಕ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತನ್ನ ಪತಿ ಜೈರಾಮ ನಾಯ್ಕ ತವರುಮನೆಯಿಂದ ಒಡವೆ ಹಾಗೂ ಹಣವನ್ನು ತರುವಂತೆ ಪೀಡಿಸಿ ಮಾನಸಿಕ ಹಿಂಸೆ ನೀಡಿ ಜೀವಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಭಟ್ಕಳ:೩೧ ಬೈಕನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವನಿಗೆ ಗ್ಯಾಸ್ ರೆಗ್ಯುಲೇಟರ್‌ನಿಂದ ತಲೆ ಮೇಲೆ ಹೊಡೆದು ಗಾಯಗೊಳಿಸಿದ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂದರ ರಸ್ತೆಯ ಇಲಿಯಾಸ ಅಸ್ಲಂ ಶಾಬಂದ್ರಿ ನಗರ ಠಾಣೆಯಲ್ಲಿ ಈ ಕುರಿತು ದೂರನ್ನು ನೀಡಿದ್ದು ತಾನು ಬಂದರ ರಸ್ತೆಯ ಟಿ ಎಂ ಸಿ ಗಾರ್ಡನ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನ ಬಳಿ ದಾರಿಬಿಡು ಎಂದು ಕೇಳಿದ್ದಕ್ಕೆ ಆತ ಕೋಪಗೊಂಡು ಕೈಯಲ್ಲಿದ್ದ ಗ್ಯಾಸ್ ರೆಗ್ಯುಲೇಟರ್‌ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು, ವ್ಯಕ್ತಿಯಾರು ಎಂದು ಪರಿಚಯವಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆಯ ಎಸೈ ಮಂಜುನಾಥ ಗೌಡ ಆರೋಪಿತನ ಹುಡುಕಾಟದಲ್ಲಿದ್ದಾರೆ.

ಭಟ್ಕಳ:೩೧ ವಾಹನವನ್ನು ನಿಧಾನವಾಗಿ ಚಲಾಯಿಸಿ ಎಂದು ಹೇಳಿದ್ದಕ್ಕೆ ಮೂವರು ವ್ಯಕ್ತಿಗಳು ದಂಪತಿಗೆ ಹಲ್ಲೆ ನಡೆಸಿದ್ದಲ್ಲದೇ ಮನೆಗೆ ನುಗ್ಗಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಜೀವಬೆದರಿಕೆ ಹಾಕಿದ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂದರ ರಸ್ತೆಯ ಮೂರನೇ ಕ್ರಾಸ್‌ನ ನಿವಾಸಿ ಮೆಹಜಾ ಅಬುಬೂಕರ್ ಮುಕ್ರಿ ಠಾಣೆಯಲ್ಲಿ ನೀಡಿದ ದೂರಿನಲ್ಲಿ ನಿನ್ನೆ ಮಧ್ಯಾಹ್ನ ೧೨.೪೫ರ ಸುಮಾರಿಗೆ ಬಂದರ ರಸ್ತೆಯಲ್ಲಿ ಇಲಿಯಾಸ ಅಸ್ಲಂ ಟೈಗರ್, ಹಾಗೂ ಇನ್ನೊಬ್ಬ ವ್ಯಕ್ತಿ ವಾಹನವನ್ನು ಅತಿವೇಗದಿಂದ ಚಲಾಯಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ತನ್ನ ಪತಿ ಅಬು ಮುಮದ್ ಮುಕ್ರಿ ಇವರಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸಿ ಎಂದು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಇವರು ಪತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೇ ತಪ್ಪಿಸಲು ಹೋದ ನನ್ನನ್ನೂ ದೂಡಿಹಾಕಿ ಮನೆಗೆ ನುಗ್ಗಿ ಅಕ್ಕಿ,ಪಾತ್ರೆ ಮುಂತಾದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ತಮ್ಮಲ್ಲಿ ಬಂದೂಕು ಇದ್ದು ಅದರಿಂದ ಸಾಯಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಎಸೈ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ