ಅವಧಿ ಮುಗಿಸಿದ ಪಂಚಾಯತ್ ಅಧಿಕಾರ. ಒಂದು ಹಿನ್ನೋಟ
ಅವಧಿ ಮುಗಿಸಿದ ಪಂಚಾಯತ್ ಅಧಿಕಾರ. ಒಂದು ಹಿನ್ನೋಟ
ಭಟ್ಕಳ:೩೧, ಅಂತೋ ಭಟ್ಕಳ ತಾಲೂಕಿನ ಹದಿನಾರು ಗ್ರಾಮ ಪಂಚಾಯತ್‌ಗಳು ತಮ್ಮ ಐದು ವರ್ಷದ ಆಡಳಿತ ಅವಧಿಯನ್ನು ಮುಗಿಸಿ ನಿಟ್ಟುಸಿರು ಬಿಟ್ಟಿವೆ. ಇದೀಗ ಅದರ ಅಧಿಕಾರ ಆಡಳಿತಾಧಿಕಾರಿಗಳ ಕೈಗೆ ಬಂದಿದೆ. ಅಂತೋ ಹಳ್ಳಿಯ ಪಂಚಾಯತ್ ರಾಜಕೀಯಕ್ಕೆ ಒಂದಷ್ಟು ಬ್ರೇಕ್. ಅದು ಸ್ವಲ್ಪ ದಿನ ಎನ್ನಬಹುದು. ಮತ್ತೆ ಎಪ್ರಿಲ್ ತಿಂಗಳಲ್ಲಿ ಪಂಚಯಾತ್ ಚುನಾವಣೆ ನಡೆಸುವುದಾಗಿ ನಮ್ಮ ಸಿ.ಎಮ್. ಘೋಷಿಸಿದ್ದಾರೆ. ಹೋಗಲಿ ಬಿಡಿ. ವಿಷಯ ಅದಲ್ಲ. ವಿಷಯ ಇರುವುದು ಅವಧಿ ಮುಗಿಸಿದ ಪಂಚಾಯತ್ ಅಧಿಕಾರ, ಅದರ ಹಿನ್ನೋಟವನ್ನು ವಿಮರ್ಶಿಸುವುದೆ ಈ ಬರಹದ ಉದ್ದೇಶ.
ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಒಂದೊಂದು ಗ್ರಾಮ ಪಂಚಾಯತ್‌ಗಳು ಒಂದೊಂದು ರೀತಿಯಲ್ಲಿ ಸುದ್ದಿ ಮಾಡಿ ಜನರ ಗಮನ ಸೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಟ್ಕಳದ ಕೆಲವು ಪಂಚಾಯತ್‌ಗಳು ವಿವಿಧ ಕಾರಣಕ್ಕೆ ಜಿಲ್ಲೆಯಲ್ಲೇ ಪ್ರಸಿದ್ದಿ ಪಡೆದಿದೆ. ಇಲ್ಲಿನ ಬಹುತೇಕ ಪಂಚಾಯತ್‌ಗಳು ಸದಾ ಗೊಂದಲ, ರಾಜಕೀಯ ಒತ್ತಡ, ಜನಪ್ರತಿನಿಧಿಗಳ ಕಿತ್ತಾಟದಿಂದಲೇ ತನ್ನ ಆಡಳಿತದ ಅವಧಿಯನ್ನು ಮುಗಿಸಿ ಬಿಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕೆಲವು ಕಡೆ ಅಧ್ಯಕ್ಷರು-ಕಾರ್ಯದರ್ಶಿ ನಡುವೆ ವೈಮನಸ್ಸು ಬಂದು ಬಡಿದಾಡಿಕೊಂಡು ಪೊಲೀಸ್ ಠಾಣಾ ಮೆಟ್ಟಿಲೂ ಏರಿದ ಪ್ರಸಂಗವೂ ಸಹ ನಡೆದಿತ್ತು. ಅದರಂತೆ ಕೆಲವು ಕಡೆ ಕಡೆ ಚುನಾಯಿತ ಪ್ರತಿನಿಧಿಗಳಲ್ಲಿ ಹೊಂದಾಣಿಕೆ ಇಲ್ಲದೇ ಗೊಂದಲ ಉಂಟಾದ ಘಟನೆಯೂ ನಡೆದಿತ್ತು. ಹೀಗೆ ಆಡಳಿತದ ಐದು ವರ್ಷದ ಅವಧಿಯಲ್ಲಿ ಒಂದೊಂದು ಪಂಚಾಯತ್‌ನದ್ದು ಒಂದೊಂದು ಅವತಾರ. ಕಳೆದ ಐದು ವರ್ಷಗಳಲ್ಲಿ ಯಾವ್ಯಾವ ಪಂಚಾಯತ್ ಎಂತಹ ಸ್ಥಿತಿ ಎದುರಿಸಿತ್ತು ಎಂಬುದರ ಕುರಿತು ಈ ಮುಂದೆ ಸಂಕ್ಷಿಪ್ತವಾಗಿ ತಿಳಿಯಬಹುದಾಗಿದೆ. ತಾಲೂಕಿನ ತುತ್ತತುದಿಯ ಗ್ರಾಮ ಪಂಚಾಯತ್ ಆದ ಬೈಲೂರಿನಲ್ಲಿ ಮೊದಲು ಎರಡೂವರೇ ವರ್ಷದಲ್ಲಿ ಚುನಾಯಿತ ಪ್ರತಿನಿಧಿಗಳಲ್ಲೇ ಬಹಳಷ್ಟು ಜಗಳ ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು/ ಇಲ್ಲಿ ಆಡಳಿತ ನಡೆಸುವವರೂ ಏನೇ ಮಾಡಿದರೂ ಸಹ ವಿರೋಧ ಪಕ್ಷದವರು ಅದಕ್ಕೆ ಅಡ್ಡಿ ಪಡಿಸಿ ಗದ್ದಲ ಉಂಟು ಮಾಡುತ್ತಿದ್ದರು. ಆರಂಭದ ಹಂತದಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ ಇಲ್ಲಿ ಸಾಮಾನ್ಯ ಸಭೆ ನಡೆಸುವುದೂ ಸಹ ಕಾರ್ಯದರ್ಶಿಗೆ ಕಷ್ಟವಾಗುತ್ತಿತ್ತು. ಒಮ್ಮೆ ಜಲಾನಯನ ಇಲಾಖೆಯ ಸಮಿತಿಗೆ ಸಂಬಂಧಿಸಿದಂತೆ ಪಂಚಾಯತ್‌ನಲ್ಲಿ ಚುನಾಯಿತ ಪ್ರತಿನಿಧಿಗಳು ಕೈಕೈ ಮಿಲಾಸಿಕೊಂಡಿದ್ದರು. ಎರಡೂವರೆ ವರ್ಷದ ನಂತರ ವಿರೋಧ ಪಕ್ಷದವರೇ ಆಡಳಿತದ ಚುಕ್ಕಾಣಿ ಹಿಡಿದಿದ್ದರಿಂದ ಗದ್ದಲವೆಲ್ಲಾ ತಂಡವಾಯಿತು. ಪ್ರಸಿದ್ದ ಪ್ರವಾಸಿ ಕ್ಷೇತ್ರದಲ್ಲಿರುವ ಮಾವಳ್ಳಿ ಪಂಚಾಯತ್ ಸಹ ಐದು ವರ್ಷದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದೆ. ಮೊದಲ ಹಂತದಲ್ಲಿ ಇಲ್ಲಿ ಕಾರ್ಯದರ್ಶಿ ಮತ್ತು ಸದಸ್ಯರ ನಡುವೆ ವೈಮನಸ್ಸು ಉಂಟಾಗಿ ಸುಧಾರಿಸಲು ತಾಪಂ ಕಾರ್ಯನಿರ್ವಹಣಾಧಿಕಾರಿ ಪದೇ ಪದೇ ತೆರಳಬೇಕಾದ ಪರಿಸ್ಥಿತಿ ಇತ್ತು. ಎರಡು ವರ್ಷಗಳ ಕಾಲ ಖಾಯಂ ಕಾರ್ಯದರ್ಶಿಯವರಿಲ್ಲದೇ ಪಂಚಾಯತ್ ಆಡಳಿತ ನಡೆಸಿದ್ದೂ ಇಲ್ಲಿನ ವಿಶೇಷ. ನಂತರ ಎರಡನೇ ಅವಧಿಯ ಅಧ್ಯಕ್ಷರನ್ನು ಸದಸ್ಯರೇ ಅವಿಶ್ವಾಸ ಮಾಡಿ ಕೆಳಗಿಳಿಸಿದ ಘಟನೆ ನಡೆದಿದ್ದು ಇತಿಹಾಸ. ವಾಹನಕ್ಕೆ ಶುಲ್ಕ ವಿಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪಂಚಾಯತ್‌ನ ಮತ್ತು ಮುರ್ಡೇಶ್ವರ ದೇವಸ್ಥಾನ ಟ್ರಸ್ಟ ಮಧ್ಯೆ ಹಗ್ಗಜಗ್ಗಾಟ ನಡೆದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಘಟನೆಯೂ ಸಹ ನಡೆದಿತ್ತು. ಪಂಚಾಯತ್‌ನಲ್ಲಿ ಹೆಚ್ಚು ಯುವಕರೇ ಸದಸ್ಯರಾಗಿದ್ದರೂ ಸಹ ಮಹತ್ವದ ನಿರ್ಧಾರಕೈಗೊಳ್ಳಲು ವಿಫಲರಾಗಿದ್ದಾರೆ ಎಂದೇ ಹೇಳಬಹುದು. ಇನ್ನು ಕಾಯ್ಕಿಣಿ ಪಂಚಾಯತ್‌ನಲ್ಲಿ ಹೇಳುವಂತಹ ಏನೇ ಘಟನೆ ನಡೆಯದಿದ್ದರೂ ಇಲ್ಲಿಯೂ ಸಹ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಕಚ್ಚಾಟ ಪ್ರತಿ ಸಭೆಯಲ್ಲೂ ಮುಂದುವರಿದಿದ್ದು ಮಾತ್ರ ಸತ್ಯ. ಇಲ್ಲಿಯೂ ಖಾಯಂ ಕಾರ್ಯದರ್ಶಿ ಇಲ್ಲದೇ ಅಭಿವೃದ್ದಿ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಬೇಂಗ್ರೆ ಪಂಚಾಯತ್‌ನಲ್ಲಿ ಆಡಳಿತ ಮತ್ತು ವಿರೋಧಿ ಪಕ್ಷದ ಸದಸ್ಯರ ಸಂಖ್ಯೆ ಸಮಬಲದಲ್ಲಿದ್ದರೂ ಸಹ ಒಮ್ಮೆ ಬಿ ಜೆ ಪಿ ಬೆಂಬಲಿತ ಹಾಗೂ ಇನ್ನೊಮ್ಮೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಇಲ್ಲಿ ಖಾಯಂ ಕಾರ್ಯದರ್ಶಿ ಇದ್ದರೂ ಸಹ ಮಾವಳ್ಳಿ, ಕಾಯ್ಕಿಣಿಯ ಚಾರ್ಜನ್ನು ನೀಡಲಾಗಿತ್ತು. ಬೇರೆ ಪಂಚಾಯತ್‌ಗಳಿಗೆ ಹೋಲಿಸಿದಲ್ಲಿ ಶಿರಾಲಿ ಪಂಚಾಯತ್‌ನಲ್ಲಿ ಅಭಿವೃದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳೇ ನಡೆದಿದೆ. ಈ ಪಂಚಾಯತ್‌ಗೆ ಕೇಂದ್ರ ಸರಕಾರ ನಿರ್ಮಲ ಗ್ರಾಮ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಈ ಪಂಚಾಯತ್ ಘಟಾನುಘಟಿ ಸದಸ್ಯರನ್ನೇ ಹೊಂದಿದ್ದು, ಆರಂಭದಲ್ಲಿ ಕೆಲವು ಕೈಕೈ ಮಿಲಾಯಿಸುವ ಚರ್ಚೆಗಳು ನಡೆದಿದ್ದರೂ ಸಹ ಕೊನೆಯ ಹಂತದಲ್ಲಿ ಸದಸ್ಯರು ವಾರ್ಡಿನ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂಬುದು ಗಮನಾರ್ಹ ಅಂಶ. ಇಲ್ಲಿಯೂ ಆರಂಭದ ಹಂತದಲ್ಲಿ ಕಾರ್ಯದರ್ಶಿ ಮತ್ತು ಸದಸ್ಯರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹಿಂದುಳಿದ ಮತ್ತು ಗುಡ್ಡಗಾಡು ಪ್ರದೇಶವಾದ ಕೊಪ್ಪದಲ್ಲಿ ಹೇಳುವಂತಹ ಯಾವುದೇ ಘಟನೆ ನಡೆಯಲಿಲ್ಲ ಎನ್ನಬಹುದು. ಹೆಬಳೆಯಲ್ಲಿ ಎರಡೂ ಅವಧಿಯಲ್ಲೂ ಸಹ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಕೆಲವರ ಅಡೆತಡೆಯಿಂದಾಗಿ ಕೃಷ್ಣ ಮೊಗೇರ ಅಧ್ಯಕ್ಷ ಸ್ಥಾನಕ್ಕೆ ಎರಡು ಬಾರಿ ಸ್ಪರ್ಧಿಸಿ ಸೋಲು ಅನುಭವಿಸುವಂತಾಯಿತು. ಈ ಪಂಚಾಯತ್‌ನಲ್ಲೂ ಸಹ ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಬಿಸಿಬಿಸಿ ಚರ್ಚೆಯಾಗಿದೆ. ಜಾಲಿಯಲ್ಲಿ ಪಂಚಾಯುತ್ ಸ್ಥಳಾಂತರ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು ಬಿಟ್ಟರೆ ಇಲ್ಲಿ ಎಲ್ಲವೂ ಶಾಂತಿಯುತಾಗಿತ್ತು. ವಿಶೇಷವೆಂದರೆ ಈ ಪಂಚಾಯತ್‌ನಲ್ಲಿ ಮಸ್ಲೀಂರೇ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಿದ್ದರು. ಮಾವಿನಕುರ್ವೆಯಲ್ಲಿ ಪಡಿತರ ಚೀಟಿ ಸೇರಿದಂತೆ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೇ ಒಮ್ಮೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಆರಂಭದ ಹಂತದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಇಲ್ಲಿ ಕೋಲಾಹಲವೇ ಉಂಟಾಗುತ್ತಿತ್ತು. ವಿಶೇಷವೆಂದರೆ ಇಲ್ಲಿ ಎಲ್ಲಾ ಸದಸ್ಯರು ಬಿಜೆಪಿ ಬೆಂಬಲಿತರೇ ಆಗಿರುವುದು. ಮುಂಡಳ್ಳಿ ಪಂಚಾಯತ್‌ನಲ್ಲಿ ಹೇಳಿಕೊಳ್ಳುವಂತಹ ಘಟನೆ ನಡೆಯದಿದ್ದರೂ ಸಹ ಇಲ್ಲಿ ಕಾರ್ಯದರ್ಶಿಗೆ ವ್ಯಕ್ತಿಯೋರ್ವ ಥಳಿಸಿದ್ದರ ಬಗ್ಗೆ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಉಳಿದಂತೆ ಮುಟ್ಟಳ್ಳಿ ಪಂಚಾಯತ್‌ನಲ್ಲಿ ಚರ್ಚೆ ಸೌಹಾರ್ದಯುತವಾಗಿ ನಡೆದಿದೆ. ಕೆಲವು ಗೊಂದಲ ಉಂಟಾಗಿದ್ದರೂ ಸಹ ಅದನ್ನು ಸದಸ್ಯರೇ ಬಗೆಹರಿಸಿಕೊಂಡಿದ್ದಾರೆ. ಆಡಳಿತದ ಕೊನೆಯ ದಿನ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇನ್ನು ಯಲ್ವಡಿಕವೂರು ಪಂಚಾಯತ್‌ನಲ್ಲಿ ಮೊದಲ ಅವಧಿಯಲ್ಲಿ ಅನೇಕ ಗೌಜಿ,ಗಲಾಟೆಗಳು ನಡೆದಿದೆ. ಧಾರ್ಮಿಕ ಕೇಂದ್ರವೊಂದಕ್ಕೆ ಪರವಾನಿಗೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ದಿನಗಳ ಕಾಲ ಪೊಲೀಸ್ ಬಂದೋಬಸ್ತ ಕೂಡ ಏರ್ಪಡಿಸಲಾಗಿತ್ತು. ಅದರಂತೆ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಹೊಂದಾಣಿಕೆ ಇಲ್ಲದೇ ಅನೇಕ ಬಾರಿ ವಾಗ್ವಾದ ನಡೆದಿತ್ತು. ನಂತರ ಎರಡನೇ ಅವಧಿಗೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದವರೇ ಆಡಳಿತ ಚುಕ್ಕಾಣಿ ಹಿಡಿದಿದ್ದರಿಂದ ಎಲ್ಲವೂ ಶಾಂತವಾಯಿತು. ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ಗೊಂದಲದಲ್ಲಿಯೇ ಆಡಳಿತ ಮುಗಿಸಿದೆ. ಕಳೆದ ಐದು ವರ್ಷಗಳಲ್ಲಿ ಐದು ಮಂದಿ ಕಾರ್ಯದರ್ಶಿಗಳು ಇಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಮೂವರು ವಿವಿಧ ಕಾರಣಕ್ಕಾಗಿ ಸಸ್ಪೆಂಡ್ ಆಗಿದ್ದನ್ನೂ ಇಲ್ಲಿ ಸ್ಮರಿಸಬಹುದು. ಬೆಳಕೆಯಲ್ಲಿ ನಡೆದ ಅಕ್ಕಿ ಮಾರಾಟ ಹಗರಣ ಇಡೀ ಜಿಲ್ಲೆಯಲ್ಲಿ ಸುದ್ದಿ ಮಾಡಿತ್ತು. ಈ ಪ್ರಕರಣ ಠಾಣಾ ಮೆಟ್ಟಿಲೇರಿತ್ತು. ಗ್ರಾಮ ಸಭೆಯಲ್ಲಿ ಜನರ ಪ್ರಶ್ನೆಗೆ ಉತ್ತರಿಸುವುದೆಂದರೆ ಅಧಿಕಾರಿಗಳು ತಡವರಿಸುತ್ತಿದ್ದರು. ಕೆಲವು ಗ್ರಾಮ ಸಭೆಗಳೂ ಮುಂದಕ್ಕೆ ಹಾಕಿದ ಉದಾಹರಣೆಯೂ ಇದೆ. ಇಲ್ಲಿ ರಾಜಕೀಯ ಮಂದಿಗಳ ಒತ್ತಡ ಹೆಚ್ಚಿದ್ದರಿಂದ ಯಾವುದು ಮಾಡಿದರೂ ಕಷ್ಟ ಎಂಬ ಪರಿಸ್ಥಿತಿ ಪಂಚಾಯತ್‌ನದ್ದಾಗಿತ್ತು. ಇನ್ನು ಗ್ರಾಮೀಣ ಪ್ರದೇಶವಾದ ಹಾಡುವಳ್ಳಿ ಪಂಚಾಯತ್‌ನಲ್ಲಿ ಎಂ ಪಿ ಶೈಲೇಂದ್ರ ಎರಡೂ ಬಾರಿ ಅಧ್ಯಕ್ಷರಾಗಿ ಅವಧಿ ಮುಗಿಸಿದ್ದಾರೆ. ಇಲ್ಲಿ ಗೊಂದಲವೇನೂ ಉಂಟಾಗಲಿಲ್ಲ ಎನ್ನಬಹುದು. ಕೋಣಾರ ಪಂಚಾಯತ್‌ನ ಜನಸ್ಪಂದನಾ, ಗ್ರಾಮ ಸಭೆಗಳಲ್ಲಿ ಅನೇಕ ವಾಗ್ವಾದ ನಡೆದಿದೆ. ಪಂಚಾಯತ್‌ನ ಕೆಲವು ಆಡಳಿತ ನೀತಿ ವಿರೋಧಿಸಿ ಸಾರ್ವಜನಿಕರು ಸಿಡಿದೆದ್ದಿದ್ದನ್ನು ಸ್ಮರಿಸಬಹುದು. ಇನ್ನು ಕೊನೆಯದಾಗಿ ಮಾರೂಕೇರಿ ಪಂಚಾಯತ್‌ನ ಬಗ್ಗೆ ಹೇಳಬೇಕೆಂದರೆ ಓರ್ವ ಸದಸ್ಯರನ್ನು ಹೊರತುಪಡಿಸಿ ಉಳಿವರೆಲ್ಲರೂ ಕಾಂಗ್ರೆಸ್ ಬೆಂಬಲಿತ ಸದಸ್ಯರೇ. ಇಲ್ಲಿಯೂ ಸಹ ಕಾರ್ಯದರ್ಶಿ ಮತ್ತು ಅಧ್ಯಕ್ಷರ ಮಧ್ಯೆ ವೈಮನಸ್ಸು ಬಂದು ಬಡಿದಾಡಿಕೊಂಡು ಪ್ರಕರಣ ಠಾಣೆ ಮೆಟ್ಟಿಲೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿನ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಸಾರ್ವಜನಿಕರು ಜಿಪಂ, ತಾಪಂಗೆ ದೂರಿದ್ದಾರೆ. ಈ ಬಗ್ಗೆ ತನಿಖೆಯೂ ಸಹ ನಡೆಯುತ್ತಿದೆ. ಇದರಲ್ಲಿ ಎಷ್ಟು ಸತ್ಯಾತ್ಯತೆ ಇದೆ ಎಂಬುದು ಗೊತ್ತಾಗಬೇಕಿದೆ. ಹೀಗೆ ಅನೇಕ ಏಳು ಬೀಳುಗಳ ಮಧ್ಯೆ ತಾಲೂಕಿನ ಪಂಚಾಯತಿಗಳು ಅಧಿಕಾರ ಮುಗಿಸಿದೆ. ಜನಪ್ರತಿನಿಧಿಗಳೆಲ್ಲಾ ಮಾಜಿಗಳಾಗಿದ್ದಾರೆ. ಇನ್ನು ಇವೆರೆಲ್ಲಾ ಹಾಲಿಗಳಾಗಲು ಚುನಾವಣೆ ನಡೆಯಬೇಕಷ್ಟೇ. ಅಲ್ಲಲ್ಲಿ ಈಗಲೇ ರಾಜಕೀಯದ ಕಸರತ್ತು ಶುರುವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ