ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ

ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ
*ಎಮ್.ಆರ್.ಮಾನ್ವಿ.
ಹೌದು. ಈ ಮಾತು ನೂರಕ್ಕೆ ನೂರು ಸತ್ಯ. ಪ್ರವಾದಿ ಮುಹಮ್ಮದ್(ಸ) ಎಂಬಚೈತನ್ಯದ ಚಿಲುಮೆ ಅರೇಬಿಯಾದ ಮರುಳುಗಾಡಿನಲ್ಲಿ ಹುಟ್ಟಿ ಈ ಇಹಲೋಕ ತ್ಯಜಿಸಿ ಇಂದಿಗೂ ೧೫೦೦ ವರ್ಷಗಳೇ ಸಂಧಿವೆ. ಆದರೂ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ ನಡೆ-ನುಡಿ, ಎಲ್ಲವೂ ಇಂದಿಗೂ ಲಿಖಿತ ರೂಪದಲ್ಲಿ ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿ ಭದ್ರವಾಗಿದೆ. ಅದಕ್ಕಾಗಿಯೆ ಇಂದು ಲೋಕದ ಜನತೆಗೆ ಪ್ರವಾದಿ ಮುಹಮ್ಮದ್(ಸ) ಹಾಗೂ ಅವರು ತಂದ ಇಸ್ಲಾಮ್ ಧರ್ಮ ಕುತುಹಲವನ್ನು ಮೂಡಿಸಿದೆ. ಪ್ರವಾದಿ ಮುಹಮ್ಮದ್(ಸ)ರ ವಿರೋಧಿಗಳು ಅದೆಷ್ಟೂ ಅವರ ಕುರಿತಂತೆ ಗುಲ್ಲೆಬ್ಬಿಸಿದರೂ, ಪ್ರವಾದಿಯನ್ನು ಅರಿಯುವ ಜನರ ಕುತುಹಲ ತಣಿಯುತ್ತಿಲ್ಲ. ಕಳೆದ ನೂರು ವರ್ಷಗಳ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್(ಸ) ರ ಕುರಿತಂತೆ ಬರೆಯಲ್ಪಟ್ಟ ಪುಸ್ತಕಗಳು ಅತಿ ಹೆಚ್ಚು ಮರಾಟಗೊಂಡಿವೆ ಎಂಬುದರ ಕುರಿತು ಸರ್ವೆಯೊಂದು ತಿಳಿಸಿದೆ. ಆದ್ದರಿಂದಲೇ ನಾವು ಪ್ರವಾದಿ ಮುಹಮ್ಮದ್(ಸ) ರನ್ನು ಇಂದಿಗೂ ಪ್ರಸ್ತುತ ಅನ್ನಲೆಬೇಕು. ಅವರು ಬಿಟ್ಟು ಹೋದ ಅಸಂಖ್ಯಾತ ಅಗಣಿತ ನುಡಿ ಮುತ್ತುಗಳು ಹಾಗೂ ಅವರ ಅನುಯಾಯಿಗಳೆ ಇದಕ್ಕೆ ಸಾಕ್ಷಿ.
ಅಂಧಕಾರ, ಅನಾಚಾರ,ಜೂಜು ವ್ಯಭಿಚಾರ, ಶರಾಬು, ಹೀಗೆ ಹತ್ತು ಹಲವು ಕೆಡುಕುಗಳು ತಾಂಡವವಾಡುತ್ತಿರುವ ಅರೆಬಿಯಾದ ಆ ಸಮಾಜದಲ್ಲಿ ಸ್ವಾರ್ಥಿಗಳ ಅಟ್ಟಹಾಸವು ಮೇರೆ ಮೀರಿತ್ತು. ಅಲ್ಲಿ ಮಾನವೀಯ ಮೌಲ್ಯಗಳು ಸತ್ತು ಹೋಗಿದ್ದವು. ಮಾನವೀಯ ಮತ್ತು ಸದಾಚಾರ ಮಾಯವಾಗಿದ್ದವು. ಯಹೂದಿ ಮತ್ತು ಕ್ರೈಸ್ತರು ತಮ್ಮ ಪೂರ್ವ ಗ್ರಂಥಗಳ ನಿಯಮಗಳನ್ನು ಗಾಳಿಗೆ ತೂರಿದ್ದರು. ಆನರಲ್ಲಿ ಯಾವುದೆ ಧಾರ್ಮಿಕತೆಯ ಕುರುಹು ರವಷ್ಟಾದರೂ ಕಾಣುತ್ತಿರಲಿಲ್ಲ.
“ಯಧಾಃ ಯಧಾಃಯ ಧರ್ಮಸ್ಯಃ ಗ್ಲಾನಿರ್ಭವತಿ ಭಾರತ. . . . ಎನ್ನುವ ಗೀತೋಪದೇಶದಂತೆ ಯಾವಾಗೆಲ್ಲ ಭೂಮಿಯ ಮೇಲೆ ಕೆಡುಕುಗಳು ತಾಂಡವವಾಡುತ್ತಿರುವವೋ ಆಗಲೆಲ್ಲ ಓರ್ವ ಸುಧಾರಕ, ಸಂದೇಶವಾಹಕರನ್ನು ಈ ಭೂಮಿಯ ಕಳುಹುಸಲಾಗುತ್ತದೆ. ಆದ್ದರಿಂದ ಅರಬ್ ಜನತೆ ಅಂತಹ ಓರ್ವ ಸಂದೇಶಕರ ಆಗಮನದ ನಿರೀಕ್ಷೆಯಲ್ಲಿದ್ದರು. ಈ ಕುರಿತು ಬೈಬಲ್ ಮತ್ತು ಯಹೂದಿಗಳ ಗ್ರಂಥಗಳಲ್ಲಿ ಬಂದ ಭವಿಷ್ಯವಾಣಿಯನ್ನು ಕೇಳಿ ತಿಳಿದಿದ್ದ ಮಂದಿ ಅಂತಹ ಓರ್ವ ಸುಧಾರಕನ ಅಗಮನವನ್ನು ಕಾತರದಿಂದಲೇ ಕಾಯುತ್ತಿದ್ದರು.
ಅನೈತಿಕತೆಯ ಎಲ್ಲಾ ಮೇರೆಗಳನ್ನು ಮೀರಿ ನಿಂತ ಅರಬ್ ಜನಾಂಗ ಎಲ್ಲ ರೀತಿಯಿಂದಲೂ ಅಧಪತನಕ್ಕಿಳಿದಿದ್ದರು. ಇಂತಹ ಸಂದರ್ಭದಲ್ಲಿ ಕ್ರಿ.ಶ. ೫೭೧ರ ಎಪ್ರಿಲ್ ಅಂದರೆ ರಬಿವುಲ್ ಅವ್ವಲ್ ೧೨ರಂದು ಪ್ರವಾದಿ ಮುಹಮ್ಮದ್(ಸ) ಶಾಂತಿಯ ಧೂತರಾಗಿ ಈ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಮೀನಾ ಮತ್ತು ಅಬ್ದುಲ್ಲಾ ದಂಪತಿಗಳಿಗೆ ಜನಿಸಿದ ಈ ಮಗು ಇನ್ನು ತಾನು ತಾಯಿಯ ಗರ್ಭದಲ್ಲಿರುವಾಗಲೆ ತಾಯಿಯನ್ನು ಕಳೆದುಕೊಂಡಿತು. ಅನಾಥನಾಗಿ ಬೆಳೆದ ಇವರು ಮುಂದೆ ಅನಾಥರ, ನಿರ್ಗತಿಕರ ರಕ್ಷಕರಾಗಿ ಅವರ ಆಸರೆಯಾದರು.
ವಿಶ್ವದೊಡೆಯನಾದ ಸೃಷ್ಟಿಕರ್ತನು ಪ್ರವಾದಿ ಮುಹಮ್ಮದ್(ಸ)ರನ್ನು ಜಗತ್ತಿಗೆ ಗುರುವಾಗಿ ವಿಶ್ವಜನತೆಯ ವಿಮೋಚಕರಾಗಿ ನಿಯೋಗಿಸಿದನು.
ಹಿರಾ ಎಂಬ ಬೆಟ್ಟದಲ್ಲಿರುವ ಗುಹೆಯಲ್ಲಿ ಏಕಾಂತರಾಗಿ ಧ್ಯಾನ ಮಗ್ನರಾಗಿದ್ದ ಪ್ರವಾದಿ ಮುಹಮ್ಮದ್ (ಸ) ರವರನ್ನು ಜಿಬ್ರೀಲ್(ಅ) ಎಂಬ ದೇವಚರ ಸಮೀಪಿಸಿ ಈ ಮಹತ್ತರವಾದ ಹೊಣೆಯನ್ನು ವಹಿಸಿಕೊಡಲು ಅಲ್ಲಾಹನ ದಿವ್ಯವಾಣಿಯನ್ನು ಕೊಡುವುದರೊಂದಿಗೆ ಅಲ್ಲಾಹನ ಸಂದೇಶವಾಹಕರಾಗಿ ನಿಯೋಗಿಸಲಾಯಿತು . ಪ್ರವಾದಿ (ಸ) ತನಗೆ ಲಭಿಸಿದ ದಿವ್ಯವಾಣಿ ಬಗ್ಗೆ ಪ್ರಿಯ ಪತ್ನಿ ಖದೀಜ (ರ) ರೊಡನೆ ಹೇಳಿಕೊಂಡಾಗ ಅವರ ಸಾಂತ್ವಾನದ ಮಾತುಗಳು ಪ್ರವಾದಿ ಮುಹಮ್ಮದ್ (ಸ) ರವರಲ್ಲಿ ಧೈರ್ಯತುಂಬಿತು . ಆಪ್ತ ಸಹಪಾಠಿಯಾಗಿದ್ದ ಅಬೂಬಕರ್ (ರ) ರವರೊಡನೆ ದೇವ ಸಂದೇಶವನ್ನು ತಿಳಿಸುವ ಮೂಲಕ ಬೋಧನೆಗೆ ಚಾಲನೆ ನೀಡಿದರು . ಅವರು ತಕ್ಷಣ ಪ್ರವಾದಿ (ಸ) ರವರ ಮೇಲೆ ವಿಶ್ವಾಸವಿರಿಸಿದರು ನಂತರ ಖದೀಜ , ಬಾಲಕ ಅಲಿ(ರ) ಮುಂತಾದವರು ವಿಶ್ವಾಸವಿರಿಸಿದರು .
ಅಬೂಬಕರ್ (ರ) ರವರ ಮೂಲಕ ಅವರ ಮಿತ್ರರು ಮತ್ತು ಜೊತೆಗಾರರಾಗಿರುವ ಹಲವು ಪ್ರಮುಖ ವ್ಯಕ್ತಿಗಳು ಇಸ್ಲಾಮ್ ಸ್ವೀಕರಿದರು . ಹೀಗೆ ಹೊಸ ಒಂದು ಸಣ್ಣ ಗುಂಪಿನ ಉದಯವಾಯಿತು , ಪ್ರವಾದಿ(ಸ) ರವರ ಸಂದೇಶವನ್ನು ಸ್ವೀಕರಿಸಿದ ಈ ಕೆಲವೇ ಮಂದಿ ತಮ್ಮ ಮನೆಮಂದಿ , ಕುಟುಂಬದವರು ಮತ್ತು ಪರಿಚಿತರೊಂದಿಗೆ ಈ ಧರ್ಮದ ಬಗ್ಗೆ ಚರ್ಚೆ ನಡೆಸಿದರು . ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಇಸ್ಲಾಮ್ ಹರಡಿ ಜನರಲ್ಲಿ ಇಸ್ಲಾಮಿನ ಬಗ್ಗೆ ತಿಳಿಯುವ ಕುತೂಹಲ ಮೂಡಿತು.
ಹೀಗೆ ಮೂಡಿದ ಕುತುಹಲ ಇಂದಿಗೂ ಹಾಗೆಯು ಮುಂದುವರಿಯುತ್ತಿದೆ. ಇಸ್ಲಾಮ್ ಹಾಗೂ ಪ್ರವಾದಿ ಮುಹಮ್ಮದ್(ಸ) ರ ಕುರಿತಂತೆ ಎಷ್ಟೆ ಅಪಪ್ರಚಾರವೆಸಗಿದರೂ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರವಾದಿ ಚರಿತೆಯನ್ನು ಅರಿಯುವ ಉತ್ಸುಕತೆಯನ್ನು ತೋರುತ್ತಿರುವುದು ಮಾತ್ರ ನಿತ್ಯಸತ್ಯವಾಗಿದೆ.
ಪ್ರವಾದಿ ಮುಹಮ್ಮದ್(ಸ) ರ ಬೋಧನೆಗಳ ತಿರುಳನ್ನು ೧೨ನೇ ಶತಮಾನದಲ್ಲಿ ಬಾಳಿ ಬೆಳಗಿದ ಸಮಾಜ ಸುಧಾರಕ ಬಸವಣ್ಣನವ ಹಲವಾರು ವಚನಗಳಲ್ಲಿ ನಮಗೆ ಕಂಡು ಬರುತ್ತದೆ. ಅಲ್ಲದೆ ಪ್ರವಾದಿ(ಸ)ರು ಅಳವಡಿಸಿಕೊಂಡಿದ್ದ ಕೆಲವೊಂದು ವ್ಯವಸ್ಥೆಗಳನ್ನು ೧೨ನೇ ಶತಮಾನದಲ್ಲಿ ಬಸವಣ್ಣನವರು ಅಳವಡಿಸಿಕೊಂಡಿದ್ದನ್ನು ನಾವು ಕಾಣುತ್ತೇವೆ. ಝಕಾತ್ ವ್ಯವಸ್ಥೆಯನ್ನು ಶಿವನಿಧಿಯನ್ನಾಗಿಯೂ, ಅಸ್ಸಹಾಬೆ ಸುಪ್ಫಾವನ್ನು ಅನುಭವ ಮಂಟಪವನ್ನಾಗಿಯೂ, ದಾನ ಧರ್ಮ, ಬಡವರಿಗೆ ಉಣಬಡಿಸುವುದನ್ನು ದಾಸೋಹವನ್ನಾಗಿಯೂ, ಪರಿವರ್ತಿಸಿಕೊಂಡಿದ್ದು ಅವರ ಹಲವಾರು ವಚನಗಳಲ್ಲಿ ಇಸ್ಲಾಮ್ ಧರ್ಮದ ಮೂಲ ತಳಹದಿಯಾದ ಏಕದೇವ ವಿಶ್ವಾಸವನ್ನು ಕಾಣುತ್ತೇವೆ. ಜಾತಿ ವ್ಯವಸ್ಥೆ, ಮಹಿಳಾ ಶೋಷಣೆ, ಮೇಲು ಕೀಳು, ಬಹುದೇವರಾಧನೆ ಮುಂತಾದ ಅನಿಷ್ಟಗಳನ್ನು ತೊಡೆದು ಹಾಕಿದ ಪ್ರವಾದಿ ಮುಹಮ್ಮದ್(ಸ)ರ ಹಾದಿಯಲ್ಲೆ ನಡೆದ ಬಸವಣ್ಣನವರ ಅನುಯಾಯಿಗಳಿಗೆ ‘ಶರಣ’ ಎನ್ನಲಾಗುತ್ತದೆ. ಅದೇ ರೀತಿ ಮುಸ್ಲಿಮ್ ಎಂಬ ಅರಬಿ ಪದದ ಕನ್ನಡ ಅನುವಾದವೂ ‘ಶರಣ’ ಆಗಿರುವುದು ಪ್ರವಾದಿ(ಸ) ಹಾಗೂ ಬಸವಣ್ಣನ ಶಿಕ್ಷಣಗಳಿಗೆ ಎಷ್ಟೊಂದು ಸಾಮ್ಯತೆ ಇದೆ ಅಲ್ಲವೇ? ಆದ್ದರಿಂದಲೆ ಪ್ರವಾದಿ ಮುಹಮ್ಮದ್(ಸ) ಇಂದಿಗೂ ಪ್ರಸ್ತುತ ಎಂದು ಹೇಳಿದ್ದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ