ಭ್ರಷ್ಟಚಾರದಿಂದ ನಮ್ಮ ಮನೆ ಮತ್ತು ಮನ ಮುಕ್ತವಾಗಲಿ
೨೦೧೦ ನೇ ವರ್ಷದಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟಿದ್ದು ‘ಭ್ರಷ್ಟಚಾರ’ ವಿಷಯವಾಗಿ. ಏಕೆಂದರೆ ಈ ವರ್ಷ ನಮ್ಮ ರಾಜಕೀಯ ಭ್ರಷ್ಟಚಾರ ಸ್ಪೋಟಗೊಂಡು ಇಲ್ಲಿನ ರಾಜಕೀಯ ಲೆಕ್ಕಚಾರಗಳನ್ನೆ ಬುಡಮೇಲನ್ನಾಗಿಸಿತು. ಅದಕ್ಕಾಗಿಯೆ ಈ ವರ್ಷವನ್ನು ಭ್ರಷ್ಟ ರಾಜಕಾರಣಿಗಳ ವರ್ಷ ಎಂದರೆ ತಪ್ಪಾಗಲಾರದು.
ಡಿ.೯ನ್ನು ಪ್ರತಿವರ್ಷ ಅಂತರಾಷ್ಟ್ರೀಯ ಭ್ರಷ್ಟಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ದಿನದಂದು ಮೈಕಿನ ಮುಂದೆ ನಿಂತು ಭ್ರಷ್ಟಚಾರದ ಬಗ್ಗೆ ಫುಂಖಾನುಪುಂಖವಾಗಿ ಭಾಷಣ ಬಿಗಿಯುವ ವ್ಯಕ್ತಿಯ ಚರಿತ್ರೆಯೂ ಸಹ ‘ಭ್ರಷ್ಟಚಾರ’ ರಹಿತವಾಗಿರುತ್ತದೆ ಎನ್ನುವುದರ ಯಾವ ಗ್ಯಾರಂಟಿಯನ್ನು ನಾವು ನೀಡಕಾಗಲ್ಲ. ಏಕೆಂದರೆ ಇಂದು ಭ್ರಷ್ಟಚಾರ ಎನ್ನುವುದು ರಕ್ತದಂತೆ ನಮ್ಮ ದೇಹದ ತುಂಬೆಲ್ಲ ಹರಿದಾಡುತ್ತಿದೆ. ವ್ಯವಸ್ಥೆಯ ಹಾಗೆ ಆಗಲು ಕಾರಣ ಯಾರು? ಎನ್ನುವ ಪ್ರಶ್ನೆ ಹುಡುಕಲು ಹೋದರೆ ಬಹಳ ಗಜಲಿನಲ್ಲಿ ಸಿಲುಕೊಳ್ಳಬೇಕಾದೀತು. ಆದ್ದರಿಂದ ಈ ವ್ಯವಸ್ಥೆ ಹೇಗಾದರೂ ಇರಲಿ. ಮೊದಲು ನಾವು ನಮ್ಮ ‘ಮನೆ’ ಮತ್ತು ‘ಮನ’ವನ್ನು ಇಣುಕಿ ನೋಡುವ. ಎಷ್ಟರ ಮಟ್ಟಿಗೆ ನಾವು ಈ ಭ್ರಷ್ಟಚಾರ’ ಎನ್ನುವ ಪೆಡಂಭೂತ ಹುಟ್ಟಲು, ಬೆಳೆಯಲು ಮತ್ತು ತನ್ನ ಕಬಂಧಬಾಹುಗಳನ್ನು ಚಾಚಲು ಕಾರಣೀಕರ್ತರಾಗಿದ್ದೇವೆ ಎನ್ನವುದು ಸ್ಪಷ್ಟವಾಗುತ್ತದೆ.
ಭ್ರಷ್ಟಚಾರ’ ಪದಕ್ಕೆ ನಿಘಂಟಿನಲ್ಲಿ ದುರಾಚಾರ, ದುರ್ನೀತಿ, ಅನ್ಯಾಯ ಎಂಬೆಲ್ಲ ಅರ್ಥಗಳು ಇವೆ. ‘ಲಂಚ’ ಕೊಡು-ಕೊಳ್ಳುವಿಕೆಗೂ ನಾವು ‘ಭ್ರಷ’ ಎನ್ನುವ ಪದವನ್ನು ಬಳಸುವುದುಂಟು. ಅಂದರೆ ದುರಾಚಾರದ ಮತ್ತು ಕೆಟ್ಟ ನಡತೆಯ ಕೆಲಸಗಳು,ಅನ್ಯಾಯ,ಅನೀತಿಗಳು, ವಾಮಮಾರ್ಗಗಳೆಲ್ಲವೂ ಭ್ರಷ್ಟಚಾರ ಎಂಬ ಪದದ ಗಡಿಯೊಳಗೆ ಬರುತ್ತವೆ ಎನ್ನುವಂತಾಯಿತು.
ಹಾಗೆ ನೋಡಿದರೆ ಈ ಭ್ರಷ್ಟಚಾರ ಹುಟ್ಟಲು ಪ್ರಥಮತಃ ನಾವೇ ಕಾರಣರು. ನಮ್ಮ ಮನೆ ಭ್ರಷ್ಟತೆಯ ಉಗಮ ಸ್ಥಾನ. ಮನೆಯಲ್ಲಿ ಮಕ್ಕಳಿಗೆ ಕಲಿಸುವ ವಿದ್ಯೆಯಲ್ಲಿ ಇದೂ ಒಂದು ಎನ್ನಬಹುದು. ಮಕ್ಕಳಿಗೆ ಅಕ್ಷರ ಜ್ಞಾನದ ಪಾಠ, ಧಾರ್ಮಿಕ ವಿಷಯಗಳು ಕಲಿಸಿದಂತೆ ಭ್ರಷ್ಟಚಾರದ ಪಾಠವನ್ನು ನಮಗೆ ತಿಳಿದೋ ತಿಳಿಯದೋ, ಪರೋಕ್ಷವೋ ಅಪರೋಕ್ಷವೋ ಕಲಿಸುತ್ತ ಬಂದಿದ್ದೇವೆ. ಈಗ ಈ ದೇಶದ ತುಂಬೆಲ್ಲ ಭ್ರಷ್ಟಚಾರದ ಪೆಡಂಭೂತ ಹೆಮ್ಮರವಾಗಿ ಬೆಳೆದು ನಿಲ್ಲುವಂತಾಗಲು ನಾವೆ ಕಾರಣೀಭೂತರು ಎಂದರೆ ಯಾರೂ ಸಹ ಆಶ್ಚರ್ಯಪಡಬೇಕಾಗಿಲ್ಲ.
ಓರ್ವ ವ್ಯಕ್ತಿಯ ಮನೆಯಲ್ಲಿ ಮೂರು ಜನ ಮಕ್ಕಳು ಅದರಲ್ಲಿ ಇಬ್ಬರು ಗಂಡು ಮತ್ತು ಒಂದು ಹೆಣ್ಣು. ಮನೆಯಲ್ಲಿ ಮೂವರಿಗೆ ಸರಿಸಮಾನವಾಗಿ ಕಾಣುವುದು ಆ ತಂದೆ ತಾಯಿಗಳ ಧರ್ಮ. ಆದರೆ ಹೀಗಾಗುವುದಿಲ್ಲ. ಅಲ್ಲಿ ಅಲ್ಪಸ್ವಲ್ಪ ಏರುಪೇರುಗಳು ಆಗುವುದು ಸಹಜ. ಇಲ್ಲಿಂದಲೆ ಒಂದು ಮಗುವಿನ ಮೇಲೆ ಅನ್ಯಾಯ ಆರಂಭವಾದಂತಾಯಿತು. ಗಂಡು ಹೆಣ್ಣಿ ಮಧ್ಯೆ ತಾರತಮ್ಯಗಳು, ಸಹೋದರ,ಸಹೋದರರ ಮಧ್ಯೆ ಉಂಟಾಗುವ ತಾರತಮ್ಯಗಳು ಇವೆಲ್ಲವೂ ಮುಂದೆ ಮಕ್ಕಳ ಮೇಲೆ ಅನೇಕ ರೀತಿಯ ಪ್ರಭಾವನ್ನು ಬೀರಲು ಆರಂಭಿಸುತ್ತವೆ. ಇದರಿಂದಾಗಿ ಕೆಲವರು ಅಕ್ರಮಿಗಳು, ದುರಾಚಾರಿಗಳು, ಅತ್ಯಚಾರಿಗಳು ಆಗುತ್ತಾರೆ. ಸಮಾಜ ಇಂತಹವರಿಂದಲೆ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಮನೆಗೆ ತಂದೆಯನ್ನು ಕೇಳಲು ಬಂದಂತಹ ವ್ಯಕ್ತಿಗಳನ್ನು ತಪ್ಪಿಸಿಕೊಳ್ಳಲು ಮಗನಿಂದಲೆ ‘ಅಪ್ಪ ಮನೆಯಲ್ಲಿ ಇಲ್ಲ’ ಎಂದು ಹೇಳಲು ಕಲಿಸುತ್ತಾನೆ ತನ್ನ ಉಪಸ್ಥತಿಯಲ್ಲಿಯೆ ತಂದೆ ಸುಳ್ಳನ್ನು ಹೇಳಿದನ್ನು ಕೇಳಿದ ಮಗು ಅದನ್ನು ಅನುಸರಿಸುತ್ತದೆ. ಮುಂದೆ ತಾನು ಮಹಾ ಸುಳ್ಳುಗಾರನಾಗುತ್ತಾನೆ. ಮನೆಯಲ್ಲಿ ದಿನಸಿ ವಸ್ತುಗಳನ್ನು ತರಲು ತಾಯಿ ತನ್ನ ಮಗನ್ನು ಕಳುಹಿಸುವಾಗ ನಿನಗೆ ಬಂದ ನಂತರ ಚಾಕಲೇಟ್ ಕೊಡಿಸುವೆ ಹೋಗು ಮಗಾ ಎಂದು ಹೇಳಿ ಆತನಿಗೆ ಲಂಚ ಪಡೆಯುವ ಕಲೆಯನ್ನು ಕಲಿಸಿಕೊಡುತ್ತಾಳೆ. ಹೀಗೆ ನಮಗೆ ತಿಳಿದೋ ತಿಳಿಯದೋ ನಾವು ನಮ್ಮ ಮಕ್ಕಳನ್ನು ದುರಾಚಾರಿಯನ್ನಾಗಿ, ಭ್ರಷ್ಟರನ್ನಾಗಿ, ಸುಳ್ಳುಗಾರ, ಲಂಚಕೋರರನ್ನಾಗಿ ಮಾಡುತ್ತಿದ್ದೇವೆ. ಈಗೆ ಹೇಳಿ ಈ ‘ಭ್ರಷ್ಟ ವ್ಯವಸ್ಥೆಗೆ ಯಾರು ಕಾರಣರು ಎಂದು.
ನಮ್ಮ ದೇಶದ ರಾಜಕೀಯ ಕ್ಷೇತ್ರ ಈಗ ಭ್ರಷ್ಟಚಾರದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿಕೊಂಡಿದೆ. ಅದರಲ್ಲೂ ನಮ್ಮ ಕರ್ನಾಟಕ ದೇಶದಲ್ಲೆ ನಂಬರ್ ಒನ್ ಅನ್ನಿಸಿಕೊಂಡಿದೆ. ಇಂದು ರಾಜಕೀಯ ಕ್ಷೇತ್ರ ಅತ್ಯಂತ ಭ್ರಷ್ಟ ಎನಿಸಿಕೊಂಡಿದೆ. ಟ್ರಾನ್ಸಪರೆನ್ಸಿ ಇಂಟರ್ ನ್ಯಾಶನಲ್ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ ನಮ್ಮ ಭಾರತ ದೇಶದ ರಾಜಕೀಯ ಪಕ್ಷಗಳು ಭ್ರಷ್ಟಚಾರದಲ್ಲಿ ೪.೨ ಅಂಕಗಳನ್ನು ಪಡೆದುಕೊಂಡಿದ್ದರೆ ನಂತರದ ಸ್ಥಾನ ೪.೧ ಅಂಕಗಳನ್ನು ಪಡೆದ ಪೋಲಿಸ್‌ಇಲಾಖೆಯ ಪಾಲಾಗಿದೆ. ಸಂಸತ್ತು ಮತ್ತು ವಿಧಾನ ಸಭೆಗೆ ಮೂರನೇ ಸ್ಥಾನ ಅಂದರೆ ಅಂದರೆ ೪.೦ ಅಂಕಗಳು ಲಭಿಸಿವೆ. ವ್ಯಾಪಾರ ಮತ್ತು ಖಾಸಗೀ ಕ್ಷೇತ್ರಕ್ಕೆ ೩.೧ ಅಂಕಗಳು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಕ್ಷೇತ್ರವು ೩.೦ ಅಂಕಗಳನ್ನು ಪಡೆದಿದೆ. ಸಾರ್ವಜನಿಕ ಮತ್ತು ನಾಗರಿಕಾ ಸೇವಾ ಕ್ಷೇತ್ರಗಳೀಗೆ ೩.೫, ನ್ಯಾಯಾಂಗ ಕ್ಷೇತ್ರಕ್ಕೆ ೩.೧, ಎನ್.ಜಿ.ಒ ಗಳಿಗೆ ೩.೧, ಧಾರ್ಮಿಕ ಕ್ಷೇತ್ರಕ್ಕೆ ೨.೯, ಶಿಕ್ಷಣ ಕ್ಷೇತ್ರಕ್ಕೆ ೩.೪, ರಕ್ಷಣಾ ಕ್ಷೇತ್ರಕ್ಕೆ ೨.೮ ಅಂಕಗಳು ಲಭಿಸಿವೆ. ಅಂದರೆ ಇಲ್ಲಿ ಯಾವ ಕ್ಷೇತ್ರವು ಭ್ರಷ್ಟಚಾರದಿಂದ ಮುಕ್ತವಾಗಿಲ್ಲ. ರಾಜಕೀಯ ಕ್ಷೇತ್ರದಿಂದ ಹಿಡಿದು ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಮಾಧ್ಯಮ, ಶಿಕ್ಷಣ, ರಕ್ಷಣ, ಸಾರ್ವಜನಿಕ ವಲಯ ಎಲ್ಲಿಯವರೆಗೆಂದರೆ ಜನರನ್ನು ಸರಿದಾರಿಗೆ ತರಲು ತಾವೇ ದಾರಿ ತಪ್ಪುವ ಧಾರ್ಮಿಕ ಕ್ಷೇತ್ರದ ಮುಖಂಡರು ಇಂದು ಭ್ರಷ್ಟರಾಗಿದ್ದಾರೆ ಎಂದರೆ ಈ ದೇಶದಲ್ಲಿ ಮತ್ತೇನು ಉಳಿದಂತಾಯಿತು.
ಈ ದೇಶದ ವ್ಯವಸ್ಥೆಯೇ ಹಾಗೆ ಇಲ್ಲಿ ಆಳುವವರು ಭ್ರಷ್ಟರೇ. ಆಳಿಸಿಕೊಳ್ಳುವವರು ಅಂದರೆ ಪ್ರಜೆಗಳೂ ಭ್ರಷ್ಟರೆ. ಇಲ್ಲಿನ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಅವರನ್ನು ಆರಿಸಿ ಕಳುಹಿಸಿದ ಜನರು ಎಲ್ಲರೂ ಈ ವ್ಯವಸ್ಥೆಯಲ್ಲಿ ಬಿದ್ದು ಹೊರಬರದೆ ಒದ್ದಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಅತಿಶಕ್ತಿಯುತ ಅಸ್ತ್ರವಾದ ಮತವನ್ನು ಕೊಂಡುಕೊಳ್ಳುವುದರಿಂದರಿಂದಲೇ ತನ್ನ ಪ್ರಭಾವವನ್ನು ಪ್ರಾರಂಭಿಸುವ ಈ ವ್ಯವಸ್ಥೆ, ರಸ್ತೆಯಲ್ಲಿ ಪಾನಿಪೂರಿ ಮಾರುವ ಅಂಗಡಿಗೂ ಪೋಲಿಸ್ ಜೀಪಿಗೂ ಸಂಬಂಧ ಬೆಸೆಯುವುದರಿಂದ ಹಿಡಿದು, ವಿಧಾನಸೌಧ, ಸಂಸತ್ ಭವನದಂತಹ ಅತ್ತ್ಯುನ್ನತ ಸ್ಥಾನಗಳಲ್ಲೂ ವ್ಯವಸ್ಥಿತವಾಗಿಯೇ ಜಾರಿಯಲ್ಲಿರುವ ಈ ವ್ಯವಸ್ಥೆಯ ಸ್ಥಾನಮಿತಿ, ಆಸ್ಥಾನಮಿತಿ ವಯೋಮಿತಿ- ವರಮಾನಮಿತಿ ಇಲ್ಲದೆ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ.

ಭಾರತದಲ್ಲಿ ಭ್ರಷ್ಟಚಾರ ಮಿತಿಮೀರಿ ಏರಿಕೆ ಕಾಣುವ ಮೂಲಕ ‘ಭ್ರಷ್ಟಾಚಾರ ಮಟ್ಟ ಸೂಚ್ಯಂಕ’ದಲ್ಲಿ (ಸಿಪಿ‌ಐ) ಭಾರತ ೧೭೮ ರಾಷ್ಟ್ರಗಳ ಪೈಕಿ ೮೭ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಅಂತರಾಷ್ಟ್ರೀಯ ಭ್ರಷ್ಟಚಾರ ವಿರೋಧಿ ಸಂಸ್ಥೆ ಹೇಳಿಕೊಂಡಿದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನ್‌ನ ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿ‌ಐ) ೧೭೮ ರಾಷ್ಟ್ರಗಳು ಸೇರಿದ್ದು, ಭಾರತ ಪ್ರಸಕ್ತ ಸಾಲಿನಲ್ಲಿ ೮೭ನೇ ಸ್ಥಾನ ಪಡೆದಿದೆ. ೨೦೦೯ರಲ್ಲಿ ಭಾರತ ೮೪ನೇ ಸ್ಥಾನದಲ್ಲಿತ್ತು. ಅದೇ ರೀತಿ ನೆರೆಯ ಚೀನಾ ೭೮ನೇ ಸ್ಥಾನದಲ್ಲಿದೆ. ೨೦೦೯ರಲ್ಲಿ ಚೀನಾ ೭೯ನೇ ಸ್ಥಾನದಲ್ಲಿತ್ತು.
ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿನ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಜನರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಹಾಗೂ ಉತ್ತಮ ಆಡಳಿತ ನೀಡಲು ಭಾರತ ಎಡವಿದೆ. ಅಷ್ಟೇ ಅಲ್ಲ ಸರಕಾರಿ ಅಧಿಕಾರಿಗಳು ಲಂಚಕ್ಕೆ ಹೆಚ್ಚು ಒತ್ತಾಯಿಸುತ್ತಿರುವುದರಿಂದ ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದು ಸಮೀಕ್ಷೆ ನಡೆಸಿದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ತಿಳಿಸಿದೆ.

ಸಂಸ್ಥೆಯ ಪ್ರಾಮಾಣಿಕತೆಗೆ ಗರಿಷ್ಠ ೧೦ ಅಂಕಗಳನ್ನು ನಿಗದಿ ಮಾಡಲಾಗಿದ್ದು, ಇದರಲ್ಲಿ ಭಾರತ ಕೇವಲ ೩.೩ ಅಂಕಗಳನ್ನಷ್ಟೇ ಪಡೆದಿದೆ. ಭೂತಾನ್‌ನಂತಹ (೩೭ನೇ ಸ್ಥಾನ) ಪುಟ್ಟ ರಾಷ್ಟ್ರಗಳು ಭಾರತಕ್ಕಿಂತ ಹೆಚ್ಚು (೫.೭) ಅಂಕ ಗಳಿಸಿಕೊಂಡಿದೆ. ದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿರುವ ಭಾರೀ ಭ್ರಷ್ಟಚಾರಗಳು ಈ ವರ್ಷ ಭಾರತ ಭ್ರಷ್ಟಚಾರ ಪಟ್ಟಿಯಲ್ಲಿ ೮೭ನೇ ಸ್ಥಾನಕ್ಕೆ ಇಳಿಯಲು ಮೂಲ ಕಾರಣ ಎಂದು ಸಮೀಕ್ಷೆ ತಿಳಿಸಿದೆ.
ಡೆನ್ಮಾರ್ಕ್, ನ್ಯೂಜಿಲ್ಯಾಂಡ್ ಹಾಗೂ ಸಿಂಗಾಪುರ್ ಸೇರಿದಂತೆ ಮೂರು ದೇಶಗಳು ಅತೀ ಕಡಿಮೆ ಭ್ರಷ್ಟಾಚಾರ ನಡೆಯುವ ದೇಶ ಎಂದು ಸಮೀಕ್ಷೆ ವಿವರಿಸಿದೆ. ಡೆನ್ಮಾರ್ಕ್ ೧೦ ಅಂಕಗಳಲ್ಲಿ ೯.೩ ಅಂಕ ಗಳಿಸಿಕೊಂಡಿದೆ. ಅದೇ ರೀತಿ ನ್ಯೂಜಿಲ್ಯಾಂಡ್ ಮತ್ತು ಸಿಂಗಾಪುರ್ ಸಮಾನಾಂತರ ಅಂಕ ಪಡೆದಿವೆ. ಇನ್ನುಳಿದಂತೆ ನೆರೆಯ ಪಾಕಿಸ್ತಾನ ೧೪೩ನೇ ಸ್ಥಾನ (೨.೩ ಅಂಕ), ಬಾಂಗ್ಲಾದೇಶ ೧೩೪ (೨.೪), ಶ್ರೀಲಂಕಾ ೯೧ (೩.೨), ನೇಪಾಳ ೧೪೬ (೨.೩) ಹಾಗೂ ಮಾಲ್ಡೀವ್ಸ್ ಕೂಡ ೧೪೩ನೇ (೨.೩) ಸ್ಥಾನ ಗಿಟ್ಟಿಸಿಕೊಂಡು ಪಾಕಿಸ್ತಾನಕ್ಕೆ ಸಾಥ್ ನೀಡಿದೆ.

ಇನ್ನೊಂದೆಡೆ ಭಾರತದ ೧೬ ಮುಖ್ಯ ನ್ಯಾಯಮೂರ್ತಿಗಳಲ್ಲಿ ಕನಿಷ್ಠ ೮ ಮಂದಿ ಭ್ರಷ್ಟರು ಎಂದು ೧೯೭೭ರಿಂದ ೧೯೭೯ರವರೆಗೆ ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಕಾನೂನು ಸಚಿವರಾಗಿದ್ದ ಶಾಂತಿಭೂಷಣ್ ಗಂಭೀರ ಆಪಾದನೆ ಮಾಡಿದ್ದಾರೆ. ಆರು ಮಂದಿ ಮುಖ್ಯ ನ್ಯಾಯಮೂರ್ತಿಗಳು ಪ್ರಾಮಾಣಿಕರು, ಇನ್ನುಳಿದಂತೆ ಇಬ್ಬರು ನ್ಯಾಯಮೂರ್ತಿಗಳ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದರು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಎಂಟು ಮಂದಿ ಭ್ರಷ್ಟ ನ್ಯಾಯಮೂರ್ತಿಗಳ ಪಟ್ಟಿಯನ್ನು ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿರುವ ಭ್ರಷ್ಟ ನ್ಯಾಯಮೂರ್ತಿಗಳ ಕುರಿತು ಪತ್ರಿಕೆಯೊಂದರಲ್ಲಿ ಭೂಷಣ್ ಲೇಖನವೊಂದನ್ನು ಬರೆದಿದ್ದರು. ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಇದರಿಂದ ಅವರು ಸುಪ್ರೀಂ ಕೋರ್ಟ್‌ಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ವಿಷಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಜಾರಿಗೊಳಿಸಿದ್ದ ನೋಟಿಸೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಂತಿಭೂಷಣ್, ತಾನು ಪ್ರತಿಪಾದಿಸಿದ್ದ ಭ್ರಷ್ಟ ಮುಖ್ಯ ನ್ಯಾಯಮೂರ್ತಿಗಳ ಕುರಿತು ನ್ಯಾಯಾಲಯಕ್ಕೆ ವಿವರ ನೀಡಿದ್ದಾರೆ. ಆ ಪ್ರಕಾರ ಸುಪ್ರೀಂ ಕೋರ್ಟ್‌ನ ೧೬ ಮುಖ್ಯ ನ್ಯಾಯಮೂರ್ತಿಗಳಲ್ಲಿ ೮ ಮಂದಿ ಭ್ರಷ್ಟರು ಎಂದು ಅವರು ತಿಳಿಸಿದ್ದು, ಭ್ರಷ್ಟ ಮುಖ್ಯ ನ್ಯಾಯಮೂರ್ತಿಗಳ ಪಟ್ಟಿಯನ್ನೂ ನೀಡಿದ್ದಾರೆ.



ಕರ್ನಾಕದ ಲೋಕಾಯುಕ್ತ ವೆಂಕಟಾಚಲರ ನಂತರ ಈಗ ಭ್ರಷ್ಟಚಾರ ವಿರುದ್ಧದ ಹೋರಾಟದಲ್ಲಿ ಟೊಂಕಕಟ್ಟಿನಿಂತಿರುವವರೆಂದರೆ ಲೋಕಾಯುಕ್ತ ನಾಯಮೂರ್ತಿ ಮಾನ್ಯ ಸಂತೋಷ್ ಹೆಗಡೆ ಅವರು. ಇವರ ಹೆಸರನ್ನು ಹೇಳಲು ನಮಗೆ ಸಂತೋಷ ಅನ್ನಿಸುತ್ತದೆ. ಏಕೆಂದರೆ ಅಧಿಕಾರ ಗ್ರಹಣ ಮಾಡಿದಂದಿನಿಂದ ರಾಜ್ಯಸರ್ಕಾರವೆಂಬ ಸಮುದ್ರದಲ್ಲಿ ಇರುವ ತಿಮಿಂಗಿಲಾದಾಕಾರದ ನುಂಗಣ್ಣಗಳನ್ನು ಪತ್ತೆ ಹಚ್ಚಿ ಅವರ ಮನೆ ಮೇಲೆ ಏಕಾ‌ಎಕಿ ದಾಳಿ ನಡೆಸಿದ್ದು ಅಲ್ಲದೆ ಕೋಟ್ಯಂತರ ರೂ ಆಕ್ರಮ ಆಸ್ತಿಯನ್ನು ಬಯಲಿಗೆ ತಂದಿದ್ದಾರೆ. ೨೦೦೮ರಲ್ಲಿ ಈ ರೀತಿಯ ೯೨ ದಾಳಿಗಳು ನಡೆದಿದ್ದರೆ ೨೦೦೯ರಲ್ಲಿ ೫೩ ದಾಳಿಗಳು ನಡೆದಿವೆ.೨೦೧೦ರಲ್ಲಿ ಒಂದು ಅಂದಾಜಿನಂತೆ ಸುಮಾರು ೧೦೦ ಕ್ಕೂ ಹೆಚ್ಚು ದಾಳಿಗಳಿಗೆ ನಡೆದಿವೆ ಎನ್ನಲಾಗಿದೆ. ಪ್ರತಿ ದಾಳಿಯಲ್ಲೂ ಕನಿಷ್ಠ ೭ ರಿಂದ ೮ಅಧಿಕಾರಿಗಳ ಕೋಟಿ ಗಟ್ಟಲೆ ಅಕ್ರಮ ಆಸ್ತಿಯನ್ನು ಬೆಳಕಿಗೆ ತಂದಿದ್ದಾರೆ. ಇದರ ಜೊತೆಗೆ ಜಿಲ್ಲಾ ಪೋಲಿಸ ವರಿಷ್ಠ‌ಅಧಿಕಾರಿ ಒಳಗೊಂಡು ದೊಡ್ಡ ದೊಡ್ಡ ಅಧಿಕಾರಿಗಳು ಮತ್ತು ಕೋಲಾರದ ಕೆ.ಜಿ.ಎಫ್ ಶಾಸಕ ವೈಸಂಪಂಗಿ‌ಅವರನ್ನು ಲಂಚ ಪಡೆಯು ವಾಗಲೇ ಬಲೆಗೆ ಹಾಕಿದ್ದಾರೆ. ಈ ರೀತಿ ಭ್ರಷ್ಟಾಚಾರದ ವಿರುದ್ಧ ಸಮರವನ್ನುಸಾರಿರುವಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕಾಗಿರುವುದು ಇಂದಿನ ತುರ್ತು ಅವಶ್ಯಕತೆ ಆಗಿದೆಲೋಕಾಯುಕ್ತರಾಗಿ ನ್ಯಾಯಮೂರ್ತಿ ಸಂತೋಷ ಹೆಗಡೆ ಅಧಿಕಾರ ಸ್ವೀಕರಿಸಿದ ನಂತರ ಭೃಷ್ಠ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಅವರು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯ ವಿವರಗಳನ್ನು ಬಯಲು ಮಾಡುತ್ತಲೇ ಬಂದಿದ್ದಾರೆ. ಮುಖ್ಯ ಮಂತ್ರಿ ಯಡಿಯೂರಪ್ಪನವರು ಹಲವು ಸಂದರ್ಭಗಳಲ್ಲಿ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತೇವೆ ಎಂದು ಹೇಳುತ್ತಲೆ ಬಂದಿದ್ದಾರೆ. ಆದರೆ ಅದು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.
ಹಾಗಾದರೆ ಭ್ರಷ್ಟಚಾರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲವೆ?: ಹೀಗೊಂದು ಪ್ರಶ್ನೆ ನಮ್ಮಲ್ಲಿ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಗಳಲ್ಲಿ ಉಂಟಾಗಿರಲೂಬಹುದು. ನಾವು ನಮ್ಮ ಮನ ಮತ್ತು ಮನೆಯಿಂದ ಈ ಕಾರ್ಯವನ್ನು ಆರಂಭಿಸಬೇಕೆಂದು ನಾನು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ. ಭ್ರಷ್ಟಾಚಾರ ಈ ಮಟ್ಟಕ್ಕೆ ಬೆಳೆಯಲು ಸಮಾಜವೇ ಕಾರಣ. ಹೀಗಾಗಿ ಭ್ರಷ್ಟಾಚಾರಕ್ಕೆ ಮಂಗಳ ಹಾಡಲು ಭ್ರಷ್ಟರನ್ನು ಬಹಿಷ್ಕರಿಸುವುದೇ ಅಂತಿಮ ಮಾರ್ಗ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದರಲ್ಲಿ ಅರ್ಥವಿದೆ. “ದುಷ್ಟರನ್ನು ಕಂಡರೆ ದೂರವಿರು” ಎನ್ನವ ಗಾದೆ ಮಾತೊಂದಿದೆ. ಈಗ ನಾವು “ಭ್ರಷ್ಟರನ್ನು ಕಂಡರೆ ಬಹಿಷ್ಕಾರಿಸು” ಎನ್ನುವ ಗಾದೆ ಮಾತನ್ನು ಚಲಾವಣೆಗೆ ತಂದು ಭ್ರಷ್ಟಚಾರಕ್ಕೆ ಮಂಗಳವನ್ನು ಹಾಡಬೇಕಾಗುತ್ತದೆ.
ಮಾಧ್ಯಮ ಸಂದರ್ಶನ ಕಾರ್ಯಕ್ರಮದಲ್ಲಿ ಲೋಕಾಯುಕ್ತರು ಆಡಿದ ಮಾತುಗಳು ಭ್ರಷ್ಟಚಾರ ನಿರ್ಮೂಲನಕ್ಕೆ ನಾಂದಿ ಹಾಡಬಲ್ಲವು. ಅವರು, ಇವತ್ತು ಭ್ರಷ್ಟಾಚಾರದಿಂದ ಹಣ ಮಾಡಿದವನು ಸಮಾಜದಿಂದ ಸನ್ಮಾನಿತನಾಗುತ್ತಿದ್ದಾನೆ. ಅದರ ಬದಲು ಅವನನ್ನು ಬಹಿಷ್ಕರಿಸಿದರೆ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಬಹುದು ಎಂದರು. ನನಗನ್ನಿಸುವ ಪ್ರಕಾರ ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುವುದೇ ಭ್ರಷ್ಟಾಚಾರವನ್ನು ತಡೆಯಲು ಇರುವ ಅಂತಿಮ ಮಾರ್ಗ.ಸಮಾಜ ಅದಕ್ಕೆ ಸಿದ್ಧವಾಗಲಿ. ಇವತ್ತು ಮೀನಿನ ಬುಟ್ಟಿಯಲ್ಲಿರುವ ಯಾವುದೋ ಒಂದು ಮೀನನ್ನು ತೆಗೆದು ಇದು ವಾಸನೆ ಹೊಡೆಯುತ್ತಿದೆಯೆನ್ನಲು ಸಾಧ್ಯವಿಲ್ಲ. ಬುಟ್ಟಿಯಲ್ಲಿರುವ ಎಲ್ಲ ಮೀನುಗಳೂ ವಾಸನೆ ಹೊಡೆಯುತ್ತಲೇ ಇರುತ್ತವೆ. ಇವತ್ತು ಸರ್ಕಾರದಲ್ಲಿ ಇಂತಹ ಇಲಾಖೆ ಎಂದಲ್ಲ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿರುವುದು ವ್ಯವಸ್ಥೆಯ ಕೈಗನ್ನಡಿಯಂತಿದೆ ಅಲ್ಲವೆ?
ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲ. ನ್ಯಾಯಾಂಗವೂ ಭ್ರಷ್ಟವಾಗಿದೆ. ಇದರ ಪ್ರಮಾಣ ಉಳಿದದ್ದಕ್ಕಿಂತ ಕಡಿಮೆ ಎನ್ನಬಹುದು. ಆದರೆ ಭ್ರಷ್ಟಾಚಾರದಲ್ಲಿ ಕಡಿಮೆ ಭ್ರಷ್ಟಾಚಾರ, ಹೆಚ್ಚು ಭ್ರಷ್ಟಾಚಾರ ಎಂಬುದಿಲ್ಲ. ಭ್ರಷ್ಟಾಚಾರ ಅಂತಿಮವಾಗಿ ಭ್ರಷ್ಟಾಚಾರವಷ್ಟೇ. ಇವತ್ತು ರಾಜಕಾರಣಿಗಳು ಮತ್ತು ಅಧಿಕಾರಿಗಳು ಪರಸ್ಪರ ಕೈ ಜೋಡಿಸಿದರೆ ಮಾತ್ರ ದೊಡ್ಡ ಮಟ್ಟದ ಭ್ರಷ್ಟಾಚಾರ ಸಾಧ್ಯ. ಈ ರೀತಿ ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಭ್ರಷ್ಟಾಚಾರ ಕೂಡಾ ನ್ಯೂಟನ್‌ನ ರಿಲೇಟಿವಿಟಿ ಥಿಯರಿ ಇದ್ದಂತೆ. ಮೇಲಕ್ಕೇರಿದ್ದು ಕೆಳಗಿಳಿಯಲೇಬೇಕು, ತಮಗೆ ಹಣ ಕೊಟ್ಟರು ಎಂಬ ಕಾರಣಕ್ಕೆ ಒಬ್ಬ ಭ್ರಷ್ಟನನ್ನು ಸನ್ಮಾನಿಸುವ ಬದಲು ಆತನನ್ನು ಬಹಿಷ್ಕರಿಸುವುದೇ ಉತ್ತಮ.
ಜೀವನದಲ್ಲಿ ಗುರಿ ಇರಬೇಕು. ಆದರೆ ವಾಮಮಾರ್ಗದ ಮೂಲಕ ಗುರಿ ಸಾಧಿಸುವ ಕೆಲಸ ಆಗಬಾರದು. ಶ್ರೀಮಂತಿಕೆಯ ವಿಷಯವೂ ಹಾಗೇ. ಕಾನೂನು ಬದ್ಧವಾಗಿ ಹಣ ದುಡಿಯಬೇಕು.ಹಾಗೆ ಮಾಡದೇ ಭ್ರಷ್ಟಾಚಾರದ ಮೂಲಕ ದುಡಿದರೆ ಒಂದು ದಿನ ಸಂತೋಷವಾಗುತ್ತದೆ. ನಂತರ ಅದೇ ವ್ಯಸನವಾಗಿ ಮನುಷ್ಯನ ಬದುಕಿನ ಶಾಂತಿ ಕರಗಿಹೋಗುವ ಹಾಗೆ ಮಾಡುತ್ತದೆ. ಎಂತಹ ಮಾತುಗಳು ಇವು. ಇಂತಹ ಸಮಾಜಿಕ ಕಳಕಳಿ ರಾಜಕಾರಣಿಗೆಗಳಿದ್ದಿದ್ದರೆ ನಮ್ಮ ದೇಶದ ಭೂಪಟನೆ ಬದಲಾಗುತ್ತಿತ್ತು.
ರಾಜ್ಯ ಸರಕಾರ ಈಗಲಾದರೂ ಕಣ್ಣು ತೆರೆದು ಭ್ರಷ್ಟ ಅಧಿಕಾರಿಗಳ ಬೇಟೆಯಾಡಲು ಲೋಕಾಯುಕ್ತರಿಗೆ ಶಕ್ತಿ ತುಂಬುವ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಜೊತೆಗೆ ಲೋಕಾಯುಕ್ತರು ತನಿಖೆ ಮಾಡಿ ಸಲ್ಲಿಸಿದ ವರದಿಗಳನ್ನು ಕಾರ್ಯ ರೂಪಕ್ಕೆ ತರುವ ಕಾರ್ಯವನ್ನು ಮಾಡಬೇಕು. ಕೇವಲ ಮುಖ್ಯ ಮಂತ್ರಿ ಯಡಿಯೂರಪ್ಪನವರು ತಮ್ಮ ಕುರ್ಚಿಯನ್ನು ಉಳಿಸಿ ಕೊಳ್ಳಲು ಹೆಣಗಾಡಿದರೆ ಸಾಲದು.

ನಾವು ಅಧಿಕ ಗಳಿಸುವ ವ್ಯಾಮೋಹದಿಂದ ಹೊರಬರಬೇಕಾದ ಅಗತ್ಯತೆ ಇದೆ. ಯಾವುದೆ ಕೆಲಸ ಮಾಡಲಿ ಅದರಿಂದ ದೇಶಕ್ಕೆ ಮತ್ತು ಸಮಾಜಕ್ಕೆ ಒಳಿತಾಗಬೇಕೆಂಬ ಮನೋಭಾವದೊಂದಿಗೆ ಮಾಡಬೇಕು. ಅಪಘಾತಗಳು, ಅನಾವೃಷ್ಟಿಗಳು ನಡೆದು ಸಂತೃಸ್ತರು ಸರಕಾರ ಹಣವನ್ನು ಪಡೆಯಬೇಕಾದರೂ ಅಧಿಕಾರಿಗಳು ಲಂಚ ಪಡೆದೆ ಬಿಡುಗಡೆ ಮಾಡಿದ ಎಷ್ಟೋ ಘಟನೆಗಳು ಇಂದು ನಮ್ಮ ಕಣ್ಣ ಮುಂದಿರುವಾಗ ನಾವು ಬಹಳ ದೂರ ಹೋಗಿ ನೋಡುವ ಅವಶ್ಯಕತೆ ಇಲ್ಲ. ಲಂಚವೆ ಪ್ರಧಾನವಾಗಿರು ಇಂದಿನ ಸಮಾಜದಲ್ಲಿ ರೋಗಿಯನ್ನು ಒಳ್ಳಯ ಆಸ್ಪತ್ರೆಯಲ್ಲಿ ಉತ್ತಮ ಕೋಣೆಯನ್ನು ಕೊಡಿಸಲಸು ಲಂಚ ಪಡೆಯಲಾಗುತ್ತಿದೆ. ಪರಿಹಾರದ ಹಣ ಬಿಡುಗಡೆಗೆ, ವಿಧವ ವೇತನಕ್ಕೆ ಅಂಗವಿಕಲರ ವೇತನಕ್ಕೆ ಹಣ ಬಿಡುಗಡೆಗೊಳಿಸಲು ಅಧಿಕಾರಿಗಳು ಹಣ ಕೇಳುತ್ತಾರೆ. ಸ್ವಾಮಿ ಅಧಿಕಾರಿಗಳೇ ಆ ಹಣ ಖಂಡಿತವಾಗಿಯೂ ನಿಮಗೆ ತಾಗದೂ ಎಂದಾದರೂ ನಿಮ್ಮ ಮಕ್ಕಳು ಮರಿಗಳಿಗೆ ರೋಗ ರುಜಿನಗಳಾಗಳು ಹಣ ಮತ್ತೆ ತನ್ನ ಜಾಗ ಸೇರುವುದುಂಟು.
ಈ ವ್ಯವಸ್ಥೆ ತೊಲಗಲೆಬೇಕು. ಬುದ್ದಿ ಜೀವಿಗಳು ವಿಚಾರವಂತರು ಇದಕ್ಕಾಗಿ ಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವಂತಹ ಕಾರ್ಯಕ್ಕೆ ಕೈಹಾಕಬೇಕು. ಮುಂಬುರುವ ೨೦೧೧ ಭ್ರಷ್ಟರನ್ನು ಬಹಿಷ್ಕರಿಸಿ ಎಂಬ ಘೋಷಣೆಯೊಂದಿಗೆ ಆರಂಭವಾಗಲಿ ಎನ್ನುವುದೇ ನನ್ನ ಹೇರಾಸೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು

ತೆಂಗಿನಗುಂಡಿ ಬಂದರಿಗೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ

ಅರವತ್ತು ವರ್ಷಗಳ ‘ಆಲೆಮನೆ’ ಅನುಭವದ ಕಟಗಾರಕೊಪ್ಪ ಸೋಮಯ್ಯ ಮಾಸ್ತಿಗೊಂಡ